ಎಲ್ಗಾರ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾಗೆ ಚಿಕಿತ್ಸೆ ನೀಡಲು ಜೈಲು ಅಧಿಕಾರಿಗಳಿಗೆ ಸುಪ್ರೀಂ ಆದೇಶ

| Updated By: ರಶ್ಮಿ ಕಲ್ಲಕಟ್ಟ

Updated on: Sep 29, 2022 | 6:01 PM

ವಿಚಾರಣೆ ವೇಳೆ ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ನವ್ಲಾಖಾ ಅವರ ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದ್ದು, ಆರೋಗ್ಯ ಸಮಸ್ಯೆಗಳ ಇದೇ ನೆಪವನ್ನು ಅವರು ಹೈಕೋರ್ಟ್​ನಲ್ಲಿ ಪ್ರಸ್ತಾಪಿಸಿದ್ದು ಅದನ್ನು ತಿರಸ್ಕರಿಸಲಾಯಿತು...

ಎಲ್ಗಾರ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾಗೆ ಚಿಕಿತ್ಸೆ ನೀಡಲು ಜೈಲು ಅಧಿಕಾರಿಗಳಿಗೆ ಸುಪ್ರೀಂ ಆದೇಶ
ಗೌತಮ್ ನವ್ಲಾಖಾ
Follow us on

ದೆಹಲಿ: ದೇಶದಲ್ಲಿ ವಿಚಾರಣಾಧೀನ ಕೈದಿಗಳಿಗೂ ಬದುಕುವ ಹಕ್ಕು ಮತ್ತು ಆರೋಗ್ಯದ ಹಕ್ಕು ಇದೆ ಎಂದು ಒತ್ತಿ ಹೇಳಿದ ಸುಪ್ರೀಂಕೋರ್ಟ್ (Supreme Court), ನಿಯಮಿತ ಜಾಮೀನು ನಿರಾಕರಿಸಿದ ನಂತರ ಗೃಹ ಬಂಧನ ಕೋರಿದ್ದ ಎಲ್ಗಾರ್ ಪ್ರಕರಣದ ಆರೋಪಿ  ಗೌತಮ್ ನವ್ಲಾಖಾ (Gautam Navlakha) ಅವರಿಗೆ ಗುರುವಾರ ಮಧ್ಯಂತರ ಪರಿಹಾರ ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ. ನವ್ಲಾಖಾ ಅವರಿಗಿರುವ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಬೇಕು ಎಂದು ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠವು ತಲೋಜಾ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದ್ದು, ಆಸ್ಪತ್ರೆಗೆ ಭೇಟಿ ನೀಡಲು ಅವರ ಇಬ್ಬರು ಸಹೋದರಿಯರಿಗೆ ಅನುಮತಿ ನೀಡಿದ್ದಾರೆ. ವಿಚಾರಣೆ ವೇಳೆ ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ನವ್ಲಾಖಾ ಅವರ ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದ್ದು, ಆರೋಗ್ಯ ಸಮಸ್ಯೆಗಳ ಇದೇ ನೆಪವನ್ನು ಅವರು ಹೈಕೋರ್ಟ್​ನಲ್ಲಿ ಪ್ರಸ್ತಾಪಿಸಿದ್ದು ಅದನ್ನು ತಿರಸ್ಕರಿಸಲಾಯಿತು. ಆಮೇಲೆ ನವ್ಲಾಖಾ ಅವರು ಅರ್ಜಿಯನ್ನು ಹಿಂತೆಗೆದುಕೊಂಡರು ಎಂದಿದ್ದಾರೆ.  73 ವರ್ಷ ವಯಸ್ಸಿನ ವಿಚಾರಣಾಧೀನ ಕೈದಿಗಳ ಬಗ್ಗೆ ಮಾನವೀಯ ಧೋರಣೆಯನ್ನು ಬೇಕು ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ಇದು ದೇಶದ ರಾಷ್ಟ್ರೀಯ ಸಮಗ್ರತೆಗೆ ಹಾನಿಯನ್ನುಂಟುಮಾಡುತ್ತದೆ ಎಂದು ನಾನು ಸೂಚಿಸಲು ಬಯಸುತ್ತೇನೆ. ಈ ರೀತಿಯ ನೆಪಗಳನ್ನು ನಿರುತ್ಸಾಹಗೊಳಿಸಬೇಕು  ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.

ನವ್ಲಾಖಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 73 ವರ್ಷದ ವ್ಯಕ್ತಿಯೊಬ್ಬ ತನ್ನ ಸಹೋದರಿಯೊಂದಿಗೆ ಗೃಹಬಂಧನದಲ್ಲಿದ್ದರೆ ರಾಷ್ಟ್ರೀಯ ಸಮಗ್ರತೆಗೆ ಹೇಗೆ ಬೆದರಿಕೆಯಾಗುತ್ತಾನೆ? ಎಂದು ಕೇಳಿದ್ದಾರೆ.

ವಿಚಾರಣಾಧೀನ ಕೈದಿ ಬಗ್ಗೆ ಮಾನವೀಯತೆ ತೋರಿಸಬೇಕು. ಅವರಿಗೆ ಬದುಕುವ ಹಕ್ಕು ಇದೆ. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡಬೇಕು ಎಂದು ನ್ಯಾಯಪೀಠ ಹೇಳಿದೆ. ತಾನು ಕೇರಳದಲ್ಲಿ ಲೀಗಲ್ ಸರ್ವೀಸ್ ಮುಖ್ಯಸ್ಥರಾಗಿದ್ದಾಗ ಆದ ಅನುಭವವನ್ನು ಹೇಳಿದ ನ್ಯಾಯಮೂರ್ತಿ ಜೋಸೆಫ್, ಜೈಲುಗಳಲ್ಲಿ ಒಬ್ಬರನ್ನು ಭೇಟಿ ಮಾಡಿದ್ದೆ. ಕೈದಿಯೊಬ್ಬರು ಚಿಕಿತ್ಸೆಗಾಗಿ ವಿಚಾರಣಾಧೀನ ನ್ಯಾಯಾಲಯವನ್ನು ಕೋರಿದ್ದರೂ ಅವರಿಗೆ ಅನುಮತಿ ನಿರಾಕರಿಸಲಾಯಿತು. ಆಮೇಲೆ ಅವರು ಮರಣ ಹೊಂದಿದರು ಎಂದಿದ್ದಾರೆ. ನಂತರ ಪೀಠವು ಜೈಲುಗಳಲ್ಲಿನ ಪರಿಸರದ ಬಗ್ಗೆ ಚರ್ಚಿಸಿದ್ದು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ವಕೀಲರು ಹಣವನ್ನು ದೇಣಿಗೆ ನೀಡುವಂತೆ ಕೇಳಿದರು.

ಟಿವಿ ಮತ್ತು ಇತರ ಸೌಲಭ್ಯಗಳಿರುವ ಜೈಲಿನ ಉದಾಹರಣೆಯನ್ನೂ ನ್ಯಾಯಮೂರ್ತಿ ಜೋಸೆಫ್ ನೀಡಿದ್ದಾರೆ.
ವಿದೇಶಗಳಲ್ಲಿರುವ ಜೈಲುಗಳಲ್ಲಿ ಹಲವು ಸೌಕರ್ಯಗಳಿವೆ ಮತ್ತು ನಮಗೂ ಅಂತಹದ್ದೇನಾದರೂ ಇರಬೇಕು” ಎಂದು ಮೆಹ್ತಾ ಹೇಳಿದರು.

ಈ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಆಪಾದಿತ ಪ್ರಚೋದಕ ಭಾಷಣಗಳಿಗೆ ಸಂಬಂಧಿಸಿದೆ. ಇದು ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ.

Published On - 5:48 pm, Thu, 29 September 22