ತಿಹಾರ್ ಜೈಲಧಿಕಾರಿಗಳ ಬಗ್ಗೆ ನಂಬಿಕೆಯೇ ಇಲ್ಲ, ಆರೋಪಿಗಳನ್ನು ಬೇರೆಡೆ ಶಿಫ್ಟ್ ಮಾಡಿ; ಯುನಿಟೆಕ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ತರಾಟೆ
Unitech Case: ಯುನಿಟೆಕ್ ಪ್ರಕರಣದ ಆರೋಪಿಗಳೊಂದಿಗೆ ತಿಹಾರ್ ಜೈಲು ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿಯ ಬಗ್ಗೆ ಖುದ್ದಾಗಿ ತನಿಖೆ ನಡೆಸಿ, ನಾಲ್ಕು ವಾರಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನವದೆಹಲಿ: ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಯುನಿಟೆಕ್ ಕಂಪನಿಯ ಮಾಜಿ ನಿರ್ದೇಶಕರಾದ ಸಂಜಯ್‌ಚಂದ್ರ ಹಾಗೂ ಅಜಯ್ ಚಂದ್ರ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲು ಹಾಗೂ ತಲೋಜಾ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ದೆಹಲಿಯ ತಿಹಾರ್ ಜೈಲಿನಲ್ಲಿ ಈ ಇಬ್ಬರ ನಡವಳಿಕೆ ಕುರಿತು ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಎಂ.ಆರ್. ಶಾ ಅವರ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಹಾಗೇ, ತಿಹಾರ್ ಜೈಲಿನ ಅಧಿಕಾರಿಗಳ ಬಗ್ಗೆ ನ್ಯಾಯಾಲಯಕ್ಕೆ ನಂಬಿಕೆಯೇ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ಇಬ್ಬರು ಆರೋಪಿಗಳೊಂದಿಗೆ ತಿಹಾರ್ ಜೈಲು ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿ ಕುರಿತು ಖುದ್ದಾಗಿ ತನಿಖೆ ನಡೆಸಿ, ನಾಲ್ಕು ವಾರಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲೇ ಜೈಲಿನ ಅಧಿಕಾರಿಗಳು ಸುಪ್ರೀಂ ಕೋರ್ಟ್ನ ಆದೇಶವನ್ನು ಕಡೆಗಣಿಸಿ, ತಮಗೆ ಬೇಕಾದಂತೆ ವರ್ತನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ನ್ಯಾಯಮೂರ್ತಿ ಚಂದ್ರಚೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೈಲು ಶಿಕ್ಷೆಯಾದ ಮೇಲೂ ಜೈಲಿನಲ್ಲಿ ಕುಳಿತುಕೊಂಡೇ ಅಕ್ರಮ, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವವರಿಗೆ ತಿಹಾರ್ ಜೈಲು ಸ್ವರ್ಗವಾಗಿದೆ! ಸುಪ್ರೀಂ ಕೋರ್ಟ್ ಆದೇಶವನ್ನು ಕಡೆಗಣಿಸಿ ತಿಹಾರ್ ಜೈಲಿನ ಅಧಿಕಾರಿಗಳು ಆರೋಪಿಗಳಿಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಹೀಗಾಗಿ, ತಕ್ಷಣವೇ ಯುನಿಟೆಕ್ ಹಗರಣದ ಆರೋಪಿಗಳಾದ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಅವರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ED reveals in SC that it has found secret underground office of erstwhile Unitech founders in South Delhi here
— Press Trust of India (@PTI_News) August 26, 2021
ಯುನಿಟೆಕ್‌ನ ಸಂಸ್ಥಾಪಕ ರಮೇಶ್ ಚಂದ್ರ ರಹಸ್ಯವಾಗಿ ಭೂಗತ ಕಚೇರಿ ಸ್ಥಾಪಿಸಿರುವುದು ನಮಗೆ ತಿಳಿದುಬಂದಿದೆ ಎಂಬ ವಿಷಯವನ್ನು ಇಡಿ ಅಧಿಕಾರಿಗಳು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಸಂಜಯ್ ಚಂದ್ರ- ಅಜಯ್ ಚಂದ್ರ ಅವರ ವರ್ತನೆ ಹಾಗೂ ಈ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಇ.ಡಿ ಅಧಿಕಾರಿಗಳು ಎರಡು ವರದಿಗಳನ್ನು ಸಲ್ಲಿಸಿದ್ದಾರೆ. ಈ ಇಬ್ಬರು ಆರೋಪಿಗಳ ವರ್ತನೆ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳ ನಡವಳಿಕೆ ನಾಚಿಕೆಗೇಡಿನ ಸಂಗತಿ. ಇದು ಬಹಳ ಗಂಭೀರವಾದ ವಿಷಯವಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ.
ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಸಹೋದರರು ಹಾಗೂ ಯುನಿಟೆಕ್ ಲಿಮಿಟೆಡ್ ಕಂಪನಿಯ ವಿರುದ್ಧದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. 2015ರಲ್ಲಿ ಸಂಜಯ್ ಮತ್ತು ಅಜಯ್ ಚಂದ್ರ ವಿರುದ್ಧ ಕೇಸ್ ದಾಖಲಾಗಿತ್ತು.
Supreme Court in its order today shifted erstwhile promoters of Unitech- Sanjay Chandra, Ajay Chandra from Tihar Jail to Arthur Road Jail & Taloja Jail immediately and forthwith; it expressed its displeasure over the way they are allegedly operating from Tihar Jail in New Delhi
— ANI (@ANI) August 26, 2021
ಸುಪ್ರೀಂ ಕೋರ್ಟ್ 2021ರ ಜೂನ್ 4ರಂದು ಸಂಜಯ್ ಚಂದ್ರ ಅವರಿಗೆ ತನ್ನ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 15 ದಿನಗಳ ಮಧ್ಯಂತರ ಜಾಮೀನು ನೀಡಿತು. ಸಂಜಯ್ ಚಂದ್ರ ಅವರ ಪರವಾದ ಹಿರಿಯ ವಕೀಲರ ಕೋರಿಕೆಯಂತೆ ಸಂಜಯ್ಗೆ ಹೆಚ್ಚಿನ ಸಮಯಾವಕಾಶ ನೀಡಲು ಕೋರ್ಟ್ ನಿರಾಕರಿಸಿತ್ತು. 2020ರ ಆಗಸ್ಟ್ 14ರಂದು ಸಂಜಯ್ ಚಂದ್ರ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ, ಒಂದು ತಿಂಗಳ ಹಿಂದೆ ಅವರ ಪೋಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮಾನವೀಯತೆಯ ಆಧಾರದ ಮೇಲೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು.
ಇದನ್ನೂ ಓದಿ: NDA Exam: ಲಿಂಗ ತಾರತಮ್ಯಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ; ಈ ಬಾರಿ ಮಹಿಳೆಯರಿಗೂ ಎನ್ಡಿಎ ಪರೀಕ್ಷೆ ಬರೆಯಲು ಅವಕಾಶ
ಹೈಕೋರ್ಟ್ ಒಪ್ಪಿಗೆಯಿಲ್ಲದೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಕೇಸ್ ಹಿಂಪಡೆಯುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ
(Supreme Court Orders to Shift Unitech Ex Promoters Sanjay and Ajay Chandra From Tihar Jail to Mumbai Prison)
Published On - 7:13 pm, Thu, 26 August 21