ಜಾರಿ ನಿರ್ದೇಶನಾಲಯ(ED)ದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ(Sanjay Kumar Mishra) ಅವರ ಸೇವಾವಧಿ ವಿಸ್ತರಣೆ ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅವರು ಜುಲೈ 31ರವರೆಗೆ ಈ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಮೂರನೇ ಬಾರಿಗೆ ಮಿಶ್ರಾ ಅವರ ಸೇವಾವಧಿ ವಿಸ್ತರಣೆ ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸೇವಾವಧಿ ವಿಸ್ತರಣೆಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಾಲಯದ ಉನ್ನತಾಧಿಕಾರ ಸಮಿತಿಯ ಶಿಫಾರಸಿನ ಮೇರೆಗೆ ಅವಧಿಯನ್ನು ವಿಸ್ತರಿಸುವ ಅಧಿಕಾರ ಕೇಂದ್ರಕ್ಕಿದೆ.
ಮತ್ತಷ್ಟು ಓದಿ: ಭಯದ ವಾತಾವರಣ ಸೃಷ್ಟಿಸಬೇಡಿ: ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ
ಸಂಜಯ್ ಮಿಶ್ರಾ ಅವರನ್ನು ಮೊದಲು 2018ರ ನವೆಂಬರ್ 19ರಂದು ಎರಡು ವರ್ಷಗಳ ಅವಧಿಗೆ ಇಡಿ ನಿರ್ದೇಶಕರನ್ನಾಗಿ ನೇಮಿಸಲಾಯಿತು. ನವೆಂಬರ್ 2020ಕ್ಕೆ ಅವರ ಅಧಿಕಾರಾವಧಿ ಕೊನೆಗೊಳ್ಳಬೇಕಿತ್ತು, ಅದಕ್ಕೂ ಮೊದಲೇ ಮೇ ತಿಂಗಳಲ್ಲಿಯೇ ಅವರ ವಯಸ್ಸು 60 ಆಗಿತ್ತು. ನವೆಂಬರ್ 2020ರಲ್ಲಿ ಅವರ ಅವಧಿ ಮುಗಿಯುವ ಮೊದಲು ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳ ಬದಲಿಗೆ ಮೂರು ವರ್ಷಗಳವರೆಗೆ ವಿಸ್ತರಿಸಿತ್ತು.
ಇದಾದ ಬಳಿಕ 2021ರಲ್ಲಿ ಕೇಂದ್ರ ವಿಚಕ್ಷಣ ಕಮಿಷನ್ ಕಾಯ್ದೆ ಹಾಗೂ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆಯನ್ನು ತಂದಿತು. ಅದರ ಅಡಿಯಲ್ಲಿ ಸಿಬಿಐ ಮತ್ತು ಇಡಿ ಮುಖ್ಯಸ್ಥರಿಗೆ ಮೂರು ಸೇವಾ ವಿಸ್ತರಣೆಗಳನ್ನು ನೀಡಲಾಯಿತು.
2022ರ ನವೆಂಬರ್ರಲ್ಲಿ ಮೂರನೇ ಬಾರಿಗೆ ಕೇಂದ್ರ ಸರ್ಕಾರ ಸಂಜಯ್ ಕುಮಾರ್ ಮಿಶ್ರಾಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಿತು. ಇದರ ಪ್ರಕಾರ ಮಿಶ್ರಾ ಅವರ ಅಧಿಕಾರಾವಧಿ 2023ರ ನವೆಂಬರ್ 18 ರಂದು ಪೂರ್ಣಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ವಿಸ್ತರಣೆ ಆದೇಶವನ್ನು ರದ್ದುಗೊಳಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ