ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸುವ ಸರ್ಕಾರದ ಸುಗ್ರೀವಾಜ್ಞೆಗಳ ವಿರುದ್ಧ ಸುಪ್ರೀಂ ಮೊರೆ ಹೋದ ಮಹುವಾ ಮೊಯಿತ್ರಾ
Mahua Moitra ಸುಗ್ರೀವಾಜ್ಞೆಗಳ ಪ್ರಕಾರ ಎರಡು ವರ್ಷಗಳ ಕಡ್ಡಾಯ ಅವಧಿಯ ನಂತರ ಈಗ ಸಿಬಿಐ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು.
ದೆಹಲಿ: ಲೋಕಸಭಾ ಸಂಸದರಾದ ಮಹುವಾ ಮೊಯಿತ್ರಾ (Mahua Moitra) ಅವರು ಕೇಂದ್ರ ಸರ್ಕಾರ ಹೊರಡಿಸಿದ ಎರಡು ಸುಗ್ರೀವಾಜ್ಞೆಗಳ ವಿರುದ್ಧ ಬುಧವಾರ ಸುಪ್ರೀಂಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದರು. ಸಿಬಿಐ(CBI) ಮತ್ತು ಜಾರಿ ನಿರ್ದೇಶನಾಲಯದ (Enforcement Directorate)ನಿರ್ದೇಶಕರ ಅಧಿಕಾರಾವಧಿಯನ್ನು ಕಡ್ಡಾಯ ಎರಡು ವರ್ಷ ಅವಧಿಯ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು ಎಂಬ ಸರ್ಕಾರದ ಸುಗ್ರೀವಾಜ್ಞೆ ಪ್ರಶ್ನಿಸಿ ಮಹುವಾ ಸುಪ್ರೀಂ ಮೆಟ್ಟಿಲೇರಿದ್ದಾರೆ. ಸುಗ್ರೀವಾಜ್ಞೆಗಳು ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪಿಗೆ ವಿರುದ್ಧವಾಗಿವೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. “ಸಿಬಿಐ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸುವ ಕೇಂದ್ರ ಸುಗ್ರೀವಾಜ್ಞೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನನ್ನ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದೆ” ಎಂದು ಮಹುವಾ ಟ್ವೀಟ್ ಮಾಡಿದ್ದಾರೆ. ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡನೇ ಅರ್ಜಿ ಇದಾಗಿದೆ. ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ( Central Vigilance Commission (Amendment) Ordinance) ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಸುಗ್ರೀವಾಜ್ಞೆ(Delhi Special Police Establishment (Amendment) Ordinance) ಅಸಂವಿಧಾನಿಕ, ಅನಿಯಂತ್ರಿತ ಮತ್ತು ಸಂವಿಧಾನಕ್ಕೆ ಅತಿರೇಕವಾಗಿದೆ. ಅವುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಕೀಲ ಎಂಎಲ್ ಶರ್ಮಾ (M L Sharma) ಅವರು ಮಂಗಳವಾರ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸುಗ್ರೀವಾಜ್ಞೆಗಳ ಪ್ರಕಾರ ಎರಡು ವರ್ಷಗಳ ಕಡ್ಡಾಯ ಅವಧಿಯ ನಂತರ ಈಗ ಸಿಬಿಐ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎರಡೂ ಸಂದರ್ಭಗಳಲ್ಲಿ, ಸುಗ್ರೀವಾಜ್ಞೆಗಳ ಪ್ರಕಾರ, ಅವರ ನೇಮಕಾತಿಗಳಿಗಾಗಿ ರಚಿಸಲಾದ ಸಮಿತಿಗಳಿಂದ ಅನುಮತಿಯ ನಂತರ ನಿರ್ದೇಶಕರಿಗೆ ಮೂರು ವರ್ಷಗಳವರೆಗೆ ಪ್ರತಿ ವರ್ಷ ವಿಸ್ತರಣೆಯನ್ನು ನೀಡಬಹುದು.
My petition just filed in Supreme Court challenging Union Ordinances on extension to CBI & ED Director tenures being contrary to SC own judgements
— Mahua Moitra (@MahuaMoitra) November 17, 2021
ಇಡಿ ನಿರ್ದೇಶಕರಾಗಿ ಸಂಜಯ್ ಕುಮಾರ್ ಮಿಶ್ರಾ ಅವರ 2018 ರ ನೇಮಕಾತಿ ಆದೇಶದಲ್ಲಿ ಹಿಂದಿನ ಬದಲಾವಣೆಯನ್ನು ಪ್ರಶ್ನಿಸುವ ಅರ್ಜಿಯನ್ನು ಸೆಪ್ಟೆಂಬರ್ 8 ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು, ನಡೆಯುತ್ತಿರುವ ತನಿಖೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಮಂಜಸವಾದ ಅವಧಿಯ ವಿಸ್ತರಣೆಯನ್ನು ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಆದಾಗ್ಯೂ, ನಿವೃತ್ತಿಯ ವಯಸ್ಸನ್ನು ತಲುಪಿದ ಅಧಿಕಾರಿಗಳ ಸೇವಾವಧಿಯನ್ನು ಅಪರೂಪದ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮಿಶ್ರಾ ಅವರಿಗೆ ಇಡಿ ನಿರ್ದೇಶಕರಾಗಿ ಯಾವುದೇ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ