ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ (Delhi Air Pollution) ಮಟ್ಟ ಮಿತಿಮೀರಿದೆ. ಹೀಗೆ ಮುಂದುವರಿದರೆ ಜನರ ಜೀವನ ಕಷ್ಟವಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಆತಂಕ ವ್ಯಕ್ತಪಡಿಸಿದೆ. ಮಾಲಿನ್ಯ ಪರಿಸ್ಥಿತಿಯನ್ನು ಒಂದು ತುರ್ತು ಸಂದರ್ಭ ಎಂದೇ ಹೇಳಿರುವ ಸುಪ್ರೀಂಕೋರ್ಟ್, ಇದನ್ನು ನಿಯಂತ್ರಿಸಲು 2 ದಿನಗಳಾದರೂ ಲಾಕ್ಡೌನ್ ಮಾಡಿ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಆಪ್ ಸರ್ಕಾರಕ್ಕೆ ಸಲಹೆ ನೀಡಿದೆ.
ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯಕ್ಕೆ ಸಂಬಂಧಪಟ್ಟಂತೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆಐ ಎನ್. ವಿ.ರಮಣ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ಈಗಾಗಲೇ ದೆಹಲಿಯ ವಾಯುಗುಣಮಟ್ಟ ಅತ್ಯಂತ ಗಂಭೀರ ಪರಿಸ್ಥಿತಿ ತಲುಪಿದೆ. ಇನ್ನು 2-3ದಿನಗಳಲ್ಲಿ ಇನ್ನಷ್ಟು ಕಳಪೆಯಾಗಲಿದೆ. ಹಾಗಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೆ ತುರ್ತಾಗಿ ಏನಾದರೂ ನಿರ್ಧಾರ ಕೈಗೊಳ್ಳಬೇಕು ಎಂದು ಎರಡೂ ಸರ್ಕಾರಗಳಿಗೆ ಸೂಚನೆ ನೀಡಿದೆ.
ದೆಹಲಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕವನ್ನು ತುರ್ತಾಗಿ 500ರಿಂದ 200ಕ್ಕೆ ಇಳಿಸಬೇಕು. ಹೀಗಾಗಿ ಆದಷ್ಟು ಬೇಗನೇ ಏನಾದರೂ ಕ್ರಮಗಳನ್ನು ಕೈಗೊಳ್ಳಬೇಕು. 2 ದಿನಗಳ ಲಾಕ್ಡೌನ್ ಅಥವಾ ಇನ್ಯಾವುದೇ ವಿಧಾನಗಳ ಬಗ್ಗೆ ಯೋಚಿಸಿ. ಇಂಥ ಮಾಲಿನ್ಯದಲ್ಲಿ ಜನರು ಬದುಕುವುದಾದರೂ ಹೇಗೆ. ಮೊದಲು ಪರಿಸ್ಥಿತಿಯನ್ನು ಸ್ವಲ್ಪವಾದರೂ ಸರಿ ಮಾಡಲು ಯತ್ನಿಸಿ. ಆಮೇಲೆ ದೀರ್ಘಾವಧಿ ಕ್ರಮಗಳ ಬಗ್ಗೆ ಯೋಚಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ದೆಹಲಿಯಲ್ಲುಂಟಾದ ಮಾಲಿನ್ಯ ತುರ್ತು ಪರಿಸ್ಥಿತಿ ಸಂದರ್ಭವನ್ನು ಸರ್ಕಾರಗಳು ರಾಜಕೀಯದ ಹೊರತಾಗಿ ನೋಡಬೇಕು ಎಂದೂ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಪರ ಸುಪ್ರೀಂಕೋರ್ಟ್ನಲ್ಲಿ ವಕಾಲತ್ತು ವಹಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಯುಮಾಲಿನ್ಯದ ತುರ್ತು ಪರಿಸ್ಥಿತಿ ನಿಭಾಯಿಸುವ ಸಂಬಂಧ ಇಂದು ಕೇಂದ್ರ ಸರ್ಕಾರ ಸಭೆ ನಡೆಸಲಿದೆ. ಪೈರಿನ ಕೂಳೆ ಸುಡುತ್ತಿರುವ ಕಾರಣದಿಂದ ಮಾಲಿನ್ಯ ಮಟ್ಟ ಏರಿದೆ. ಈ ಪರಿಸ್ಥಿತಿ ನವೆಂಬರ್ 18ರವರೆಗೂ ಮುಂದುವರಿಯಲಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಮಂಡಿಸಿದ ಈ ವಾದವನ್ನು ಸುಪ್ರೀಂಕೋರ್ಟ್ ಸಂಪೂರ್ಣವಾಗಿ ಒಪ್ಪಲಿಲ್ಲ. ಮಾಲಿನ್ಯ ಮಿತಿಮೀರಲು ಕೇವಲ ರೈತರು ಕೊಯ್ದ ಪೈರಿನ ಕೂಳೆ ಸುಡುತ್ತಿರುವುದು ಒಂದೇ ಕಾರಣ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಅದಕ್ಕೆ ಹೊರತಾಗಿ ಕೂಡ ಕಾರಣಗಳು ಇವೆ. ವಾಹನಗಳಿಂದ ಉಂಟಾಗುವ ಮಾಲಿನ್ಯ, ಧೂಳು, ಕಾರ್ಖಾನೆಗಳಿಂದ ಹೊರಡುವ ವಿಷಕಾರಿ ಅನಿಲ ಅದರಲ್ಲಿ ಪ್ರಮುಖವಾದವುಗಳು. ಇವುಗಳ ನಿಯಂತ್ರಣದ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದೆ. ಇದೇ ವೇಳೆ ದೆಹಲಿ ಆಪ್ ಸರ್ಕಾರಕ್ಕೂ ಪ್ರಶ್ನೆ ಮಾಡಿದ ಕೋರ್ಟ್, ಸ್ಮಾಗ್ ಟವರ್ (ಹೊಗೆ ಹೀರುವ ಟವರ್) ಮತ್ತು ವಿಷಾನಿಲ ನಿಯಂತ್ರಣ ಯೋಜನೆಗಳ ಅನುಷ್ಠಾನ ಕಾರ್ಯ ಎಲ್ಲಿಯವರೆಗೆ ಬಂತು? ಇದೆಲ್ಲ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆಯೇ ಹೊರತು ಕೇಂದ್ರದ ವ್ಯಾಪ್ತಿಯಲ್ಲಿ ಬರುವಂಥದ್ದಲ್ಲ ಎಂದು ಹೇಳಿದೆ.
ದೆಹಲಿಯಲ್ಲಿ ಕಳೆದ ಒಂದು ವಾರದಿಂದಲೂ ವಾಯುಗುಣಮಟ್ಟ ಇಳಿಕೆಯಾಗುತ್ತಲೇ ಇದೆ. ಈಗಂತೂ ಅತ್ಯಂತ ಕಳಪೆಮಟ್ಟಕ್ಕೆ ಬಂದು ನಿಂತಿದೆ. ಶುಕ್ರವಾರದ ಹೊತ್ತಿಗೆ ತುರ್ತು ಪರಿಸ್ಥಿತಿ ಮಟ್ಟಕ್ಕೆ ಇಳಿದಿದೆ. ಗುರುವಾರ ವಾಯು ಗುಣಮಟ್ಟ ಸೂಚ್ಯಂಕ 411ರಷ್ಟಿತ್ತು. ಅದು ಶುಕ್ರವಾರ 471 ಅಂದರೆ 500ರ ಹತ್ತಿರ ಬಂದಿದೆ. ಇದು ಮಾಲಿನ್ಯಮಟ್ಟದ ಏರಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ಇದನ್ನು 200ಕ್ಕಾದರೂ ಇಳಿಸಬೇಕು ಎಂಬುದು ಸುಪ್ರೀಂಕೋರ್ಟ್ ಕಳಕಳಿ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ಲಾಸ್ಟ್ ಸೀನ್ ಆಯ್ಕೆಯಲ್ಲಿ ಅಚ್ಚರಿಯ ಹೊಸ ಫೀಚರ್: ಬೆರಗಾದ ಬಳಕೆದಾರರು