ಮುಂಬೈ: ಖಾಸಗಿ ಟ್ರಸ್ಟ್ ಒಂದರ ವಿರುದ್ಧ ನಡೆಯುತ್ತಿದ್ದ ತನಿಖೆಯನ್ನು ಮುಚ್ಚಿಹಾಕಲು ಟ್ರಸ್ಟಿಗಳ ಬಳಿ ₹ 50 ಕೋಟಿ ವಸೂಲಿ ಮಾಡುವಂತೆ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ನನ್ನ ಬಳಿ ಹೇಳಿದ್ದರು ಎಂದು ಸಸ್ಪೆಂಡ್ ಅಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಗಂಭೀರ ಆರೋಪ ಮಾಡಿದ್ದಾರೆ. ಮುಕೇಶ್ ಅಂಬಾನಿ ಮನೆ ಮುಂದೆ ಅಪರಿಚಿತ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ತನಿಖಾ ತಂಡದ ವಿಚಾರಣೆ ಎದುರಿಸುತ್ತಿರುವ ಅವರು, ಈ ಪ್ರಕರಣದ ದಿಕ್ಕು ಬದಲಿಸಬಲ್ಲ ಬಲವಾದ ವಿಷಯವನ್ನು ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ. ಎನ್ಐಎಗೆ ಸಲ್ಲಿಸಿರುವ ಪತ್ರದಲ್ಲಿ ಸಚಿನ್ ಈ ಸಂಗತಿಯನ್ನು ತಿಳಿಸಿದ್ದು, ಸಚಿನ್ ವಾಜೆ ಆರೋಪ ನಿಜವಾದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಅಸ್ಥಿರಗೊಳ್ಳುವ ಸಾಧ್ಯತೆಗಳು ಹೆಚ್ಚಾಗಲಿವೆ.
ಆದರೆ ಸಚಿನ್ ವಾಜೆ ಮಾಡಿರುವ ಆರೋಪವನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ಪರಬ್ ಅಲ್ಲಗಳೆದಿದ್ದಾರೆ. ಇದು ಬಿಜೆಪಿ ಮಾಡಿರುವ ಪಿತೂರಿಯಾಗಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಯಾವುದೇ ತನಿಖೆಗೂ ಸಿದ್ಧವಿದ್ದೇನೆ ಎಂದು ಅನಿಲ್ ಪರಬ್ ತಿಳಿಸಿದ್ದಾರೆ.
ಅನಿಲ್ ದೇಶ್ಮುಖ್ ಸ್ಥಾನ ಕಸಿದ ಆರೋಪ
ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿತ್ತು. ಸಸ್ಪೆಂಡ್ ಆಗಿರುವ ಎಎಸ್ಐ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ಪ್ರತಿ ತಿಂಗಳು 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗ ಎದುರಾಗಿತ್ತು. ತದನಂತರ ಅನಿಲ್ ದೇಶ್ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಮುಂಬೈನ ಖಾಸಗಿ ಹೊಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಅನಿಲ್ ದೇಶ್ಮುಖ್ ಹೆಸರು ಥಳುಕುಹಾಕಿಕೊಂಡಿತ್ತು. ‘ಹಿರಿಯ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಆತ್ಮಹತ್ಯಾ ಪತ್ರ ಬರೆದಿದ್ದ ಸಂಸದ ಮೋಹನ್ ದೇಲ್ಕರ್ ಬರೆದುಕೊಂಡಿದ್ದರಂತೆ. ಆದರೆ ಮೋಹನ್ ದೇಲ್ಕರ್ ಅವರ ಸಾವನ್ನು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸುವಂತೆ ಮಾಜಿ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಪರಮ್ವೀರ್ ಸಿಂಗ್ ಆರೋಪಿಸಿದ್ದಾರೆ.
ಅನಿಲ್ ದೇಶ್ಮುಖ್ಗೆ ನನ್ನ ಮೇಲೆ ಅತ್ಯಂತ ಸಿಟ್ಟಿತ್ತು. ಮೋಹನ್ ದೇಲ್ಕರ್ ಸಾವನ್ನು SIT ಗೆ ನಿಡುವುದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇಶ್ಮುಖ್ ತಿಳಿಸಿದ್ದರು ಎಂದು ಪರಮ್ವೀರ್ ಸಿಂಗ್ ಪತ್ರದಲ್ಲಿ ದೂರಿದ್ದರು
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆಯನ್ನು ರಾಜ್ಯದ ರಾಜ್ಯಪಾಲರು ಏಪ್ರಿಲ್ 5ರಂದು ಅಂಗೀಕರಿಸಿದ್ದರು. ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿ ಇರುವ ಅನಿಲ್ ದೇಶ್ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ದೇಶ್ಮುಖ್ ರಾಜೀನಾಮೆ ಅಂಗೀಕಾರವಾಗಿದ್ದು, ದಿಲೀಪ್ ವಾಲ್ಸೆ ಪಾಟೀಲ್ಗೆ ಮಹಾರಾಷ್ಟ್ರ ಗೃಹ ಸಚಿವ ಸ್ಥಾನದ ಹೊಣೆ ನೀಡಲಾಗಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿಫಾರಸಿನ ಮೇರೆಗೆ ದಿಲೀಪ್ ವಾಲ್ಸೆಗೆ ಗೃಹ ಖಾತೆ ಜವಾಬ್ದಾರಿ ವಹಿಸಲಾಗಿತ್ತು.
‘ಸೂಪರ್ ಕಾಪ್‘ ಆಗಲು ನಾನೇ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದೆ; ತಪ್ಪೊಪ್ಪಿಗೆ ಹೇಳಿಕೆ ನೀಡಿದ ಸಚಿನ್ ವಾಜೆ
( Suspended police officer Sachin Vaze claims that Maharashtra Transport Minister Anil Parab 50 crore to close a probe)