ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ: ಪುಣೆಯಲ್ಲಿ ವೆಂಟಿಲೇಟರ್ ಇರುವ ಐಸಿಯು ಬೆಡ್ ಕೊರತೆ

Coronavirus: ಪುಣೆ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಟ್ಟು 549 ವೆಂಟಿಲೇಟರ್​ಗಳಿರುವ ಐಸಿಯು ಹಾಸಿಗೆಗಳಿವೆ. 1000ಕ್ಕಿಂತಲೂ ಹೆಚ್ಚು ಬೆಡ್ ಇದ್ದರೂ ಗುರುವಾರ ಬೆಳಗ್ಗೆ ಖಾಲಿ ಇದ್ದದ್ದು ಬರೀ 63.

  • TV9 Web Team
  • Published On - 15:24 PM, 8 Apr 2021
ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ: ಪುಣೆಯಲ್ಲಿ ವೆಂಟಿಲೇಟರ್ ಇರುವ ಐಸಿಯು ಬೆಡ್ ಕೊರತೆ
ಮುಂಬೈನಲ್ಲಿ ಕೊವಿಡ್ ಪರೀಕ್ಷೆಗಾಗಿ ಸಾಲು ನಿಂತಿರುವುದು

ಪುಣೆ: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಪುಣೆ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರುವ ಐಸಿಯು ಹಾಸಿಗೆಗಳ ಕೊರತೆ ಕಂಡುಬಂದಿದೆ. ಗುರುವಾರ ಬೆಳಗ್ಗೆ ಪುಣೆ ನಗರದಲ್ಲಿ ಕೇವಲ ಐದು ಹಾಸಿಗೆಗಳು ಲಭ್ಯವಾಗಿದ್ದು, ಇದರಲ್ಲಿ ವೆಂಟಿಲೇಟರ್ ಇರಲಿಲ್ಲ. ಪೀಂಪ್ರಿ- ಚಿಂಚ್​ವಾಡ್ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳು ಇರುವ ಮೂರು ಐಸಿಯು ಬೆಡ್ ಗಳಿದ್ದು, ಎಂಟು ಬೆಡ್​ಗಳು ಖಾಲಿ ಇವೆ. ಬುಧವಾರ ಸಂಜೆ ಸಕ್ರಿಯ ಪ್ರಕರಣಗಳ ಸಂಖ್ಯೆ 90,000 ಗಡಿದಾಟಿದ್ದು ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಮತ್ತು ವೆಂಟಿಲೇಟರ್​ಗಳ ಕೊರತೆ ಕಂಡು ಬಂದಿದೆ. ಗುರುವಾರ ಇಲ್ಲಿ 11,000 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6ಲಕ್ಷ ದಾಟಿದೆ.

ಪುಣೆ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಟ್ಟು 549 ವೆಂಟಿಲೇಟರ್​ಗಳಿರುವ ಐಸಿಯು ಹಾಸಿಗೆಗಳಿವೆ. 1000ಕ್ಕಿಂತಲೂ ಹೆಚ್ಚು ಬೆಡ್ ಇದ್ದರೂ ಗುರುವಾರ ಬೆಳಗ್ಗೆ ಖಾಲಿ ಇದ್ದದ್ದು ಬರೀ 63. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಸಿಎಂಸಿ ಆರೋಗ್ಯಾಧಿಕಾರಿ ಡಾ.ಅನಿಲ್ ರಾಯ್, ವಿವಿಧ ಆಸ್ಪತ್ರೆಗಳಲ್ಲಿರುವ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್​ಗಳು ಇಲ್ಲದೇ ಇರುವ 477 ಹಾಸಿಗೆಗಳಿವೆ. ಇವುಗಳ ಪೈಕಿ ಗುರುವಾರ ಬೆಳಗ್ಗೆ 250 ಮಾತ್ರ ಖಾಲಿ ಇತ್ತು. ವೆಂಟಿಲೇಟರ್​ಗಳು ಇರುವ 229 ಬೆಡ್​ಗಳು ಪಿಸಿಎಂಸಿ ಮತ್ತು ಖಾಸಗಿ ಆಸ್ಪತ್ರೆಗಳ ಐಸಿಯುನಲ್ಲಿ ಲಭ್ಯವಾಗಿದೆ. ಈ ಪೈಕಿ ಮೂರೇ ಮೂರು ವೆಂಟಿಲೇಟರ್​ಗಳು ಲಭ್ಯವಾಗಿದ್ದವು. ಗಂಭೀರ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ವೆಂಟಿಲೇಟರ್ ಅತ್ಯಗತ್ಯವಿದ್ದು, ಅದಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ರಾಯ್ ಹೇಳಿದ್ದಾರೆ.

ಸುಮಾರು 25 ಖಾಸಗಿ ಆಸ್ಪತ್ರೆಗಳು ಕೊವಿಡ್ ರೋಗಿಗಳ ಶುಶ್ರೂಷೆ ಮಾಡಲು ಅನುಮತಿ ಕೇಳಿವೆ. ಇಲ್ಲಿಯವರೆಗೆ 18 ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಐಸಿಯುನಲ್ಲಿ ಕನಿಷ್ಠ 15-20 ವೆಂಟಿಲೇಟರ್​ಗಳು ಇರಬೇಕು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ವೈಸಿಎಂಎಚ್​, ಭೋಸರಿ, ಜೀಜಾಮಾತಾ, ಆಟೋ ಕ್ಲಸ್ಟರ್ ಮತ್ತು ಜಂಬೊ ಆಸ್ಪತ್ರೆ ಪಿಸಿಎಂಸಿ ಅಧೀನದಲ್ಲಿದ್ದು ಇಲ್ಲಿ ವೆಂಟಿಲೇಟರ್ ಗಳು ಇಲ್ಲ. 816 ಹಾಸಿಗೆಗಳಿರುವ ನೆಹರು ನಗರದ ಜಂಬೊ ಆಸ್ಪತ್ರೆಯಲ್ಲಿ ಕೇವಲ 400 ಬೆಡ್ ಗಳು ಲಭ್ಯವಾಗಿವೆ. ಆದಾಗ್ಯೂ, ಈ ಆಸ್ಪತ್ರೆಯ ಲ್ಲಿ ನಾವು ವೆಂಟಿಲೇಟರ್​ಗಳನ್ನಿಡಲು ಅನುಮತಿ ನೀಡಿದ್ದೇವೆ ಎಂದಿದ್ದಾರೆ ರಾಯ್.

ಮಹಾರಾಷ್ಟ್ರದಲ್ಲಿ 59,907 ಹೊಸ ಕೊವಿಡ್ ಪ್ರಕರಣ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 59,907 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿನ ಥಾಣೆ ಜಿಲ್ಲೆಯಲ್ಲಿ 6,290 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3,56,267ಕ್ಕೇರಿದೆ. 21ಮಂದಿ ಸೋಂಕಿತರು ಮೃತಪಟ್ಟಿದ್ದರು, ಮೃತರ ಸಂಖ್ಯೆ 6,620ಕ್ಕೇರಿದೆ. ಥಾಣೆಯಲ್ಲಿ ಮೃತರ ಸಾವಿನ ಸಂಖ್ಯೆಯ ಪ್ರಮಾಣ ಶೇಕಡಾ1.86ಆಗಿದೆ. ಇಲ್ಲಿಯವರೆಗೆ 3,02,521ಮಂದಿ ಚೇತರಿಸಿಕೊಂಡಿದ್ದು ಚೇತರಿಕೆಯ ಪ್ರಮಾಣ ಶೇಕಡಾ 84.91ಆಗಿದೆ. ಪಲ್ಘಾರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54,813ಕ್ಕೇರಿದ್ದು 1,247 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1,26,789 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಛತ್ತೀಸಗಡದಲ್ಲಿ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ 10,000 ಗಡಿದಾಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,29,28,574ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಈ ಪೈಕಿ 8,43,473 ಸಕ್ರಿಯ ಪ್ರಕರಣಗಳಿದ್ದು 1,18,51,393 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 1,66,862 ಮಂದಿ ಸಾವಿಗೀಡಾಗಿದ್ದಾರೆ. 9,01,98,673 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.  ಕಳೆದ 24 ಗಂಟೆಗಳಲ್ಲಿ 59,258 ಮಂದಿ ಚೇತರಿಸಿಕೊಂಡಿದ್ದು 685 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Coronavirus India Update: ಭಾರತದಲ್ಲಿ ಒಂದೇ ದಿನ 1.26 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ

(Covid-19 cases incresed hospitals in the Pune Municipal Corporation areas run out of ICU beds with ventilators)