ಕೊವಿಡ್ 19 ಭೂಮಿಗೆ ಬಂದು ಒಂದು ವರ್ಷದ ಮೇಲಾಗಿದೆ. ಕಳೆದ ಬಾರಿ ಕೊರೊನಾ ಶುರುವಾದ ದಿನಗಳಲ್ಲಿ ಈ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಬದಲಿಗೆ ಒಬ್ಬ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಡ್ರಾಪ್ಲೆಟ್ಗಳು, ಆತನ ಎಂಜಲಿನಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿಗಿನ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಗಾಳಿಯಲ್ಲೂ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಸಿ ಇರುವ ಕ್ಯಾಬ್, ಬಸ್, ಶಾಪಿಂಗ್ ಮಾಲ್, ಥಿಯೇಟ್ಗಳಿಗೆ ಹೋಗುವುದು ಅಪಾಯಕಾರಿ ಎನ್ನಲಾಗುತ್ತಿದೆ. ಸೋಂಕಿತನೊಂದಿಗೆ ನೇರ ಸಂಪರ್ಕ ಹೊಂದದೆ ಇದ್ದರೂ ಕೊರೊನಾ ಮಹಾಮಾರಿ ತಗಲುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.
ಕೊರೊನಾ ಸೋಂಕಿನಿಂದ ಅಪಾಯ ಎಷ್ಟಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿನಿಂದ ಪಾರಾಗುವುದೇ ಪ್ರಥಮ ಆದ್ಯತೆ ಆಗಬೇಕು ಎನ್ನುತ್ತಾರೆ ತಜ್ಞರು. ಹಾಗಿದ್ದಮೇಲೆ ಕೊರೊನಾ ವೈರಸ್ನಿಂದ ಪಾರಾಗುವುದು ಹೇಗೆ? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ
1. ಎಷ್ಟಾಗತ್ತೋ ಅಷ್ಟು ಮನೆಯಲ್ಲೇ ಇರಿ. ಅದರಲ್ಲೂ ನೀವು 60-65 ವರ್ಷ ಆಸುಪಾಸಿನವರಾಗಿದ್ದರೆ ಯಾವ ಕಾರಣಕ್ಕೂ ಮನೆಯ ಹೊರಗೆ ಹೋಗಬೇಡಿ. ಹಾಗೇ, ನಿಮಗೆ ಡಯಾಬಿಟಿಸ್, ಬಿಪಿ, ಹೈಪರ್ಟೆನ್ಷನ್ ಸೇರಿ ಮತ್ತಿತರ ಕಾಯಿಲೆಗಳಿದ್ದರೂ ಈ ಕೊವಿಡ್ ಸಮಯದಲ್ಲಿ ಹೊರಗೆ ಹೋಗಬೇಡಿ.
2. ಇನ್ನು ನೀವು ಯಾವುದೇ ವಯಸ್ಸಿನವರಾದರೂ ಸರಿ, ದಿನದಲ್ಲಿ ಆಗಾಗ ಸೋಪು ನೀರು ಹಾಕಿ ಸ್ವಚ್ಛವಾಗಿ ಕೈ, ಮುಖಗಳನ್ನು ತೊಳೆಯಿರಿ. ಹೊರಗೆ ಹೋಗಿ ಬಂದರೆ ಕಾಲನ್ನೂ ತೊಳೆದುಕೊಳ್ಳಿ.
3. ಮನೆಯಿಂದ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರಿಂದಲೂ 6 ಅಡಿ ಅಂತರ ಕಾಯ್ದುಕೊಳ್ಳಿ.
4. ಹವಾನಿಯಂತ್ರಿತ (ಎಸಿ) ಇರುವ ಕಚೇರಿಗಳು, ಮಾಲ್, ಥಿಯೇಟ್ಗಳಿಗೆ ಹೋಗಲೇಬೇಡಿ.
5. ಸಮತೋಲಿತ ಡಯಟ್ ಮಾಡುವ ಮೂಲಕ ಪೋಷಕಾಂಶಗಳನ್ನು ಸರಿಯಾಗಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಜಾಸ್ತಿ ನೀರು ಕುಡಿಯಿರಿ. ತಾಜಾ ಹಣ್ಣಿನ ರಸ, ಅರಿಶಿಣ ಮಿಶ್ರಿತ ಹಾಲನ್ನು ಸೇವನೆ ಮಾಡಿದರೆ ಇಮ್ಯೂನಿಟಿ ಜಾಸ್ತಿಯಾಗುತ್ತದೆ.
6. ಹಾಗೇ ನಿಯಮಿತವಾಗಿ ಯೋಗ, ವ್ಯಾಯಾಮ, ಧ್ಯಾನ ಮಾಡಿ. ಕೊರೊನಾ ಲಕ್ಷಣ ಇರುವ ಜನರ ಹತ್ತಿರ ಹೋಗಲೇಬೇಡಿ.
ಕಳೆದ ಬಾರಿ ಕೊರೊನಾ ಶುರುವಾದಾಗಲೇ ಆರೋಗ್ಯ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೇ ಹಲವು ಆರೋಗ್ಯ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೊರೊನಾ ಪ್ರಸರಣದ ಸರಪಳಿಯನ್ನು ಹೇಗೆಲ್ಲ ಬ್ರೇಕ್ ಮಾಡಬಹುದು ಎಂದು ತಿಳಿಸಿದ್ದಾರೆ. ಕೊರೊನಾ ಸೋಂಕಿನಿಂದ ಮುಕ್ತರಾಗಲು ಮಾಸ್ಕ್, ಸಾಮಾಜಿಕ ಅಂತರಗಳೇ ಪ್ರಮುಖ ವಿಧಾನಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೋಡಿನಲ್ಲೇ ಕೂತು ಎಣ್ಣೆ ಹೊಡೆದ ಎಣ್ಣೆ ಪ್ರಿಯರು!