ಮತಎಣಿಕೆ ಕೇಂದ್ರಗಳಿಗೆ ಅಭ್ಯರ್ಥಿ, ಏಜೆಂಟರ ಪ್ರವೇಶಕ್ಕೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಮತಎಣಿಕೆ ಆರಂಭವಾಗುವ 48 ಗಂಟೆಗಳ ಒಳಗೆ ಕೊರೊನಾ ಸೋಂಕು ತಪಾಸಣೆಯ ನೆಗೆಟಿವ್ ರಿಪೋರ್ಟ್ ಅಥವಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಆಯೋಗವು ಸೂಚಿಸಿದೆ.
ದೆಹಲಿ: ಮತಎಣಿಕೆ ಕೇಂದ್ರಗಳಿಗೆ ಅಭ್ಯರ್ಥಿ ಅಥವಾ ಏಜೆಂಟರು ಪ್ರವೇಶಿಸಲು ಚುನಾವಣಾ ಆಯೋಗವು ಕೆಲ ಷರತ್ತುಗಳನ್ನು ವಿಧಿಸಿದೆ. ಆರ್ಟಿಪಿಸಿಆರ್ ಅಥವಾ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್ಎಟಿ) ನಂತರವೇ ಕೇಂದ್ರಗಳಿಗೆ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ 2 ಡೋಸ್ ಲಸಿಕೆ ಪಡೆದುಕೊಂಡಿರಬೇಕು. ಮತಎಣಿಕೆ ಆರಂಭವಾಗುವ 48 ಗಂಟೆಗಳ ಒಳಗೆ ಕೊರೊನಾ ಸೋಂಕು ತಪಾಸಣೆಯ ನೆಗೆಟಿವ್ ರಿಪೋರ್ಟ್ ಅಥವಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಆಯೋಗವು ಸೂಚಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಂಗಳ ಸುರೇಶ ಅಂಗಡಿ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ಅವರು ಈ ಬಾರಿ ಮತಎಣಿಕೆ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಸಿಗುವುದಿಲ್ಲ.
ಈ ಕುರಿತು ಕೇಂದ್ರ ಚುನಾವಣಾ ಆಯೋಗವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ಪತ್ರ ಬರೆದಿದೆ. ಮೇ 2ರಂದು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯಲಿದೆ. ಕೆಲ ರಾಜ್ಯಗಳಲ್ಲಿ ನಡೆದಿರುವ ಉಪ ಚುನಾವಣೆಗಳ ಮತಎಣಿಕೆಯೂ ಅಂದೇ ನಡೆಯಲಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ಅಭಿಪ್ರಾಯದಂತೆ ಕೋವಿಡ್ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ ಎಂದು ಆಯೋಗವು ಹೇಳಿದೆ.
ಆಯೋಗದ ಸೂಚನೆಯ ಮುಖ್ಯಾಂಶಗಳಿವು.. ಮತಎಣಿಕೆ ನಂತರವೂ ವಿಜಯೋತ್ಸವಕ್ಕೆ ಅವಕಾಶ ಇರುವುದಿಲ್ಲ. ವಿಜೇತ ಅಭ್ಯರ್ಥಿಯು ಪ್ರಮಾಣ ಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಕೇವಲ ಇಬ್ಬರು ಬೆಂಬಲಿಗರು ಜೊತೆಗಿರಬಹುದು. ಮತಎಣಿಕೆ ನಡೆಯುವಾಗಲೂ ಕೇಂದ್ರಗಳ ಎದುರು ಯಾವುದೇ ವಿಜಯೋತ್ಸವ, ಮೆರವಣಿಗೆ, ಜನಸಂದಣಿ ಸೇರಲು ಅವಕಾಶ ಇರುವುದಿಲ್ಲ.
ಮತಎಣಿಕೆ ಕೇಂದ್ರವು ಸುರಕ್ಷಿತ ಅಂತರ ಕಾಪಾಡಿಕೊಳ್ಳುವಷ್ಟು ದೊಡ್ಡದಾಗಿರಬೇಕು. ಇವಿಎಂ/ವಿವಿಪ್ಯಾಟ್ ಯಂತ್ರಗಳನ್ನು ತೆರೆಯುವ ಮೊದಲು ಸ್ಯಾನಿಟೈಸ್ ಮಾಡಬೇಕು. ಮತಎಣಿಕೆ ಸಿಬ್ಬಂದಿಯು ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಮೂರ್ನಾಲ್ಕು ಹಾಲ್ಗಳಲ್ಲಿ ಮತಎಣಿಕೆ ನಡೆಸಬಹುದು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ.
ಕೋವಿಡ್-19 ಲಕ್ಷಣ ಇರುವ ಯಾರೊಬ್ಬರಿಗೂ ಮತಎಣಿಕೆ ಕೇಂದ್ರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಒಂದು ವೇಳೆ ತಮ್ಮ ಪರವಾದ ಏಜೆಂಟರಿಗೆ ಕೋವಿಡ್-19 ಲಕ್ಷಣಗಳು ಕಾಣಿಸಿದರೆ ಅಭ್ಯರ್ಥಿಗಳು ಅಂಥವರನ್ನು ಬದಲಿಸಲು ಅವಕಾಶ ನೀಡಲಾಗುವುದು. ಇಬ್ಬರು ಕೌಂಟಿಂಗ್ ಏಜೆಂಟ್ ನಡುವೆ ಒಬ್ಬ ಏಜೆಂಟ್ ಪಿಪಿಇ ಕಿಟ್ ಧರಿಸಿಯೇ ಕುಳಿತುಕೊಳ್ಳಬೇಕು. ಎಲ್ಲ ಮತಎಣಿಕೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ಶೀಲ್ಡ್, ಕೈಗವಸು ಒದಗಿಸಲಾಗುವುದು.
ನಿಯಮಾವಳಿ ಉಲ್ಲಂಘಿಸಿದರೆ.. ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ (2005) ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು. ಇದರ ಜೊತೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) 188ನೇ ವಿಧಿಯ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಆಯೋಗವು ಎಚ್ಚರಿಸಿದೆ.
ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿರುವ ಈ ಮಾರ್ಗಸೂಚಿ ಆಧರಿಸಿ ರಾಜ್ಯಗಳ ಮಟ್ಟದಲ್ಲಿ ಮೂರು ಹಂತದ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳಬೇಕು. ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿಯೇ ಮಾರ್ಗಸೂಚಿಗಳನ್ನು ಅಂತಿಮಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗವು ಹೇಳಿದೆ.
(Covid negative report is mandatory for candidtes to enter in to counting center on assembly election result day)
ಇದನ್ನೂ ಓದಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಜಾಹೀರಾತು; ಸ್ಟೋರಿಯಾ ಕಂಪನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Published On - 3:24 pm, Wed, 28 April 21