ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ: ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ

|

Updated on: Feb 21, 2021 | 12:40 PM

ಅತ್ತ ತಮಿಳುನಾಡು ಸಿಎಂ ಕಾವೇರಿ ನದಿ ಜೋಡಣೆಗಳ ಯೋಜನೆಗೆ ಶಂಕುಸ್ಥಾಪನೆ ಮಾಡುತ್ತಿದ್ದರೆ, ಅದರಿಂದ ರಾಜ್ಯಕ್ಕೆ ಆಗುವ ಅನನುಕೂಲದ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಸಭೆ ನಡೆಸಿದ್ದಾರೆ.

ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ: ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ
Follow us on

ಚೆನ್ನೈ: ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಜೋಡಣೆಯಾದರೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಜನರಿಗೆ ಅನುಕೂಲವಾಗುತ್ತದೆ ಎಂದು ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಹೇಳಿದ್ದಾರೆ.

ನೀತಿ ಆಯೋಗ ಸಭೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ, ವರ್ಚ್ಯುವಲ್​ ಆಗಿ ನಡೆದಿತ್ತು. ಇದರಲ್ಲಿ ಮಾತನಾಡಿದ ಪಳನಿಸ್ವಾಮಿ, ಸೂಕ್ಷ್ಮ ನೀರಾವರಿ ಯೋಜನೆಗಳಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಗೋದಾವರಿ-ಕಾವೇರಿ ನದಿ ಜೋಡಣೆಯಿಂದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ಇನ್ನು ಕಾವೇರಿ ನದಿ ಹಾಗೂ ಅದ ಉಪನದಿಗಳ ಪುನ್ಚೇತನಕ್ಕೆ ನಮಾಮಿ ಗಂಗೆ ಮಾದರಿಯ ಯೋಜನೆಯನ್ನೇ ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಹಣಕಾಸಿನ ನೆರವು ನೀಡಬೇಕು ಎಂದು ಈಗಾಗಲೇ ಮನವಿ ಮಾಡಿದ್ದೇವೆ ಎಂದು ಪಳಿನಿಸ್ವಾಮಿ ತಿಳಿಸಿದ್ದಾರೆ.

ಕಾವೇರಿ ನದಿ ಜೋಡಣೆಗೆ ಶಂಕುಸ್ಥಾಪನೆ
ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಇಂದು ಕಾವೇರಿ ನದಿಗಳ ಜೋಡಣೆ ಮೊದಲ ಹಂತದ ಬೃಹತ್​ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು 6,941 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ವೆಲ್ಲಾರು, ವೈಗೈ, ಗುಂಡಾರು ಜೋಡಣೆಗಳನ್ನು ಮಾಡಲಾಗುವುದು. ಈ ಯೋಜನೆಗಿಂದು ವಿರಾಳಿಮಲೈ- ಕುಣ್ಣತ್ತೂರು ಬಳಿ ಸಿಎಂ ಪಳಿನಿಸ್ವಾಮಿ ಶಂಕುಸ್ಥಾಪನೆ ನೆರವೇರಿಸುವರು. ಮಾ.1ರಂದು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಚಾಲನೆ ನೀಡಲಿದ್ದಾರೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ಅಲ್ಲಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕಾವೇರಿ ನದಿ ನೀರಿನ ಬಗ್ಗೆ ಮತ್ತಷ್ಟು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಮೊದಲಿನಿಂದಲೂ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ವಿವಾದ ಇದ್ದು, ಸದ್ಯ ತಮಿಳುನಾಡು ಕೈಗೆತ್ತಿಕೊಂಡಿರುವ ನದಿ ಜೋಡಣೆಯಿಂದಲೂ ರಾಜ್ಯಕ್ಕೆ ಅನನುಕೂಲವಾಗಲಿದೆ ಎಂದು ಜಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಸಭೆ
ಅತ್ತ ತಮಿಳುನಾಡು ಸಿಎಂ ಕಾವೇರಿ ನದಿ ಜೋಡಣೆಗಳ ಯೋಜನೆಗೆ ಶಂಕುಸ್ಥಾಪನೆ ಮಾಡುತ್ತಿದ್ದರೆ, ಅದರಿಂದ ರಾಜ್ಯಕ್ಕೆ ಆಗುವ ಅನನುಕೂಲದ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಸಭೆ ನಡೆಸಿದ್ದಾರೆ. ರಾಜ್ಯದ ವಕೀಲರ ತಂಡ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಮುಂದೆ ಯಾವ ರೀತಿಯಲ್ಲಿ ಕಾನೂನು ಹೋರಾಟ ನಡೆಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಾಗೇ, ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್​ರನ್ನು ರಮೇಶ್​ ಜಾರಕಿಹೊಳಿ ಭೇಟಿಯಾಗಲಿದ್ದಾರೆ.

ಇದನ್ನೂ ಓದಿ: ಮೇ 24ರೊಳಗೆ ತಮಿಳುನಾಡು ವಿಧಾನಸಭೆ ಚುನಾವಣೆ, ಶೀಘ್ರ ದಿನಾಂಕ ಘೋಷಣೆ: ಚುನಾವಣಾ ಆಯೋಗ

Published On - 12:35 pm, Sun, 21 February 21