ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ನಂತರ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET) ಪರೀಕ್ಷೆ ರದ್ದು ಮಾಡುವುದಾಗಿ ಭರವಸೆ ನೀಡಿವೆ. ತಮಿಳುನಾಡು ಕಾಂಗ್ರೆಸ್ ಪ್ರಕಾರ ನೀಟ್ ಪರೀಕ್ಷೆ ನಿರ್ದಿಷ್ಟ ರಾಜ್ಯಗಳಲ್ಲಿರುವ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತದೆ. ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ವಿಷಯದಲ್ಲಿ ಇದು ರಾಜ್ಯ ಸರ್ಕಾರದ ಹಕ್ಕಿನಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು. ಇದರ ಬದಲಾಗಿ ಸಮರ್ಥ ಸಂಸ್ಥೆಗಳ ಅನುಮತಿಯಿಂದ ರಾಜ್ಯಮಟ್ಟದಲ್ಲಿ ತತ್ಸಮಾನ ಪರೀಕ್ಷೆ ನಡೆಸಿ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ಹೇಳಿದೆ.
ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲೇನಿದೆ?
ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕಾಲೇಜು ಪ್ರವೇಶ ನೀಡಲಾಗುತ್ತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ತಂದು ತಮಿಳುನಾಡಿನ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜು ಪ್ರವೇಶ ಪಡೆಯುವ ಅವಕಾಶವನ್ನು ಕಸಿದುಕೊಂಡಿದೆ. ಡಿಎಂಕೆ ಅಧಿಕಾರಕ್ಕೆ ಬಂದರೆ ಮೊದಲ ವಿಧಾನಸಭೆ ಅಧಿವೇಶನದಲ್ಲಿಯೇ ನೀಟ್ ಪರೀಕ್ಷೆ ರದ್ದು ಮಾಡಲು ಕಾನೂನು ಮಾಡಿ, ಅದಕ್ಕೆ ರಾಷ್ಟ್ರಪತಿಯವರಿಂದ ಅಂಗೀಕಾರವನ್ನು ಕೋರಲಾಗುವುದು ಎಂದಿದೆ.
2017ರಲ್ಲಿಯೇ ಆರಂಭವಾಗಿತ್ತು ನೀಟ್ ವಿರುದ್ಧದ ಹೋರಾಟ
2017 ಸೆಪ್ಟೆಂಬರ್ ತಿಂಗಳಲ್ಲಿ ದಲಿತ ವಿದ್ಯಾರ್ಥಿ ಅನಿತಾ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು . ತಮಿಳುನಾಡಿನ 12ನೇತರಗತಿಯ ಪರೀಕ್ಷೆಯಲ್ಲಿ ಈಕೆ 1200 ಅಂಕಗಳಲ್ಲಿ 1176 ಅಂಕ ಗಳಿಸಿದ್ದಳು. ಆದಾಗ್ಯೂ 12ನೇ ತರಗತಿಯಲ್ಲಿ ಗಳಿಸಿದ ಅಂಕಗಳು ನೀಟ್ ಪರೀಕ್ಷೆಯಲ್ಲಿ ಪರಿಗಣಿಸುವುದಿಲ್ಲ. ನೀಟ್ ಪರೀಕ್ಷೆಯಲ್ಲಿ ಆಕೆ ಒಟ್ಟು 720 ಅಂಕಗಳಲ್ಲಿ 86 ಅಂಕಗಳನ್ನು ಗಳಿಸಿದ್ದಳು. ಮೀಸಲಾತಿ ವರ್ಗಗಳಿಗೆ ಕಟ್ ಆಫ್ ಮಾರ್ಕ್ ಶೇ 40 ಆಗಿದೆ. ಅನಿತಾ ಆತ್ಮಹತ್ಯೆ ನಂತರ ಹಲವಾರು ಕಾರ್ಯಕರ್ತರು ನೀಟ್ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ರಾಜ್ಯದ ಮೇಲೆ ನೀಟ್ ಪರೀಕ್ಷೆಯನ್ನು ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. 2013ರಲ್ಲಿ ನೀಟ್ ಪರೀಕ್ಷೆ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದ್ದು 2016ರಲ್ಲಿ ಅದನ್ನು ಮತ್ತೆ ತರಲಾಗಿತ್ತು.
ಇತ್ತ ಎಐಎಡಿಎಂಕೆ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭ ಮಾಡಲು 2017 ಜೂನ್ ತಿಂಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಪ್ರವೇಶಕ್ಕೆ ಶೇ 85ರಷ್ಟು ಮೀಸಲಾತಿ ಘೋಷಿಸಿತು. 2017ರಲ್ಲಿ ನೀಟ್ ಪರೀಕ್ಷೆ ಫಲಿತಾಂಶ ಘೋಷಣೆ ಆದ ಕೂಡಲೇ ಸರ್ಕಾರ ಈ ಘೋಷಣೆ ಮಾಡಿತ್ತು. ಆದಾಗ್ಯೂ, ಶೇ 85ರಷ್ಟು ಮೀಸಲಾತಿ ನೀಡಿದ್ದು ತಾರತಮ್ಯ ಎಂದು ಸಿಬಿಎಸ್ಇ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದರಿಂದ 2017 ಜುಲೈ ತಿಂಗಳಿನಿಂದ ಈ ಕಾನೂನು ಮದ್ರಾಸ್ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿಯೇ ಇದೆ.
ಆದಾಗ್ಯೂ, ತಮಿಳುನಾಡಿಗಾಗಿ ಮಾತ್ರ ನೀಟ್ ನಿಯಮಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು 2017 ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿತ್ತು. ನೀಟ್ ಮೆರಿಟ್ ಲಿಸ್ಟ್ ಮಾತ್ರ ಆಧರಿಸಿ ತಮಿಳುನಾಡಿನಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಪರೀಕ್ಷೆ ನಡೆಸಲು ನಿರ್ದೇಶನ ನೀಡಬೇಕು ಎಂದು 6 ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿತ್ತು.
2020ರಲ್ಲಿ ತಮಿಳುನಾಡು ಸರ್ಕಾರ ನೀಟ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಹೊಸತಾಗಿ ಅರ್ಜಿ ಸಲ್ಲಿಸಿ ನೀಟ್ ಪರೀಕ್ಷೆ ಅಸಂವಿಧಾನಿಕ ಎಂದು ಹೇಳಿತ್ತು. ನೀಟ್ ಪರೀಕ್ಷೆ ತಮಿಳುನಾಡಿನ ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ಧಿಯ ವಿರುದ್ಧವಾಗಿದೆ, ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೀಟ್ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ದಾಖಲೆ ಸಮೇತ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದಿಟ್ಟಿತ್ತು. 2013ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಗಿದ್ದ ಜಯಲಲಿತಾ ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಲ್ಲಿ ನೀಟ್ ಪರೀಕ್ಷೆಯನ್ನು 2016ರಲ್ಲಿ ಮತ್ತೊಮ್ಮೆ ತರುವುದು ಬೇಡ ಎಂದು ಮನವಿ ಮಾಡಿದ್ದರು.