ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ಇಂದಿಗೆ ಎರಡು ತಿಂಗಳು ತುಂಬಿದೆ. ಈ ನಡುವೆ ಭಾರತದ ನೆರೆಹೊರೆಯ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಇಲ್ಲಿ ತಯಾರಿಸಿದ ಕೊರೊನಾ ಲಸಿಕೆಯನ್ನು ತರಿಸಿಕೊಂಡಿವೆ. ಆದರೆ, ಕೇಂದ್ರ ಸರ್ಕಾರ ಹೊರದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿರುವುದನ್ನು ವಿರೋಧಿಸಿದ್ದ ಕೆಲ ವಿಪಕ್ಷ ನಾಯಕರು, ಭಾರತದಲ್ಲಿರುವ ಎಲ್ಲಾ ಪ್ರಜೆಗಳಿಗೆ ಕೊರೊನಾ ಲಸಿಕೆ ನೀಡುವ ಮುನ್ನವೇ ಬೇರೆ ದೇಶಗಳಿಗೆ ಲಸಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದವು. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್, ಹೊರದೇಶಗಳಿಗೆ ನಾವು ಲಸಿಕೆ ಕಳುಹಿಸುತ್ತಿದ್ದರೂ ದೇಶದ ಜನರಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ವಿಚಾರದಲ್ಲಿ ಆರೋಗ್ಯಕರ ನಿರ್ಣಯ ತೆಗೆದುಕೊಂಡಿದ್ದು, ಯಾವುದೇ ಕಾರಣಕ್ಕೂ ಭಾರತದ ಪ್ರಜೆಗಳಿಗೆ ಕೊರೊನಾ ಲಸಿಕೆ ಪಡೆಯುವಲ್ಲಿ ತೊಂದರೆ ಆಗಲಾರದು ಎಂದು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಸುಮಾರು 5,94 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ಕಳುಹಿಸಲಾಗಿದೆ. ವಿಜ್ಞಾನ ಎಲ್ಲರಿಗೂ ಉಪಯುಕ್ತವಾಗಬೇಕು ಎನ್ನುವ ಉದ್ದೇಶ ನಮ್ಮದು. ಈಗಾಗಲೇ ನಮ್ಮ ದೇಶದಲ್ಲಿ ತ್ವರಿತಗತಿಯಲ್ಲಿ ಕೊರೊನಾ ಲಸಿಕೆ ವಿತರಣೆ ಆಗುತ್ತಿದೆ. ನಿನ್ನೆ ಒಂದೇ ದಿನ 30 ಲಕ್ಷದಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 3 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ. ಕೊರೊನಾ ಲಸಿಕೆ ಹೇಗೆ ಸ್ವೀಕರಿಸಬೇಕು, ಎಲ್ಲಿ ಸ್ವೀಕರಿಸಬೇಕು ಎಂಬಿತ್ಯಾದಿ ವಿವರಗಳನ್ನು ಈಗಾಗಲೇ ನೀಡಿದ್ದೇವೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಗೆ ಬೇಕಾದ ಹಣವನ್ನು ಸೂಕ್ತ ಸಂದರ್ಭದಲ್ಲಿ ಮಂಜೂರು ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ 35,000 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ತಿಳಿಸಿರುವ ಹಣಕಾಸು ಸಚಿವಾಲಯ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡುವ ಭರವಸೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ದೇಶಾದ್ಯಂತ ಮೂರನೇ ಹಂತದಲ್ಲಿ 75 ಮೆಡಿಕಲ್ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 157 ಕಾಲೇಜುಗಳು ಈಗಾಗಲೇ ಅಭಿವೃದ್ಧಿ ಹಂತದಲ್ಲಿವೆ. 2014ರಲ್ಲಿ 50,000ದಷ್ಟು ವೈದ್ಯಕೀಯ ಸೀಟುಗಳು ಲಭ್ಯವಿದ್ದವು. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಆರು ವರ್ಷಗಳ ಅವಧಿಯಲ್ಲಿ ಸೀಟುಗಳ ಸಂಖ್ಯೆಯಲ್ಲಿ 30 ಸಾವಿರದಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಕೊರೊನಾ ಎರಡನೇ ಅಲೆ ಕುರಿತು ಮೋದಿ ಸಭೆ; ಮುಖ್ಯಮಂತ್ರಿಗಳಿಗೆ ಕಠಿಣ ನಿರ್ಧಾರ ಕೈಗೊಳ್ಳಲು ಸಲಹೆ ಸಾಧ್ಯತೆ?
ನಿಮಿಷಕ್ಕೆ 8,000 ಸಿರಿಂಜ್ ಉತ್ಪಾದಿಸಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ; ಕೊವಿಡ್ ಲಸಿಕೆ ಅಭಿಯಾನಕ್ಕೆ ಸಿರಿಂಜ್ ಬೇಕು