ನಿಮಿಷಕ್ಕೆ 8,000 ಸಿರಿಂಜ್ ಉತ್ಪಾದಿಸಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ; ಕೊವಿಡ್ ಲಸಿಕೆ ಅಭಿಯಾನಕ್ಕೆ ಸಿರಿಂಜ್ ಬೇಕು
ಕೊರೊನಾ ಲಸಿಕೆ ವಿತರಣಾ ಅಭಿಯಾನ ವಿಶ್ವದ ವಿವಿಧ ದೇಶಗಳಲ್ಲಿ ಆರಂಭವಾಗುವ ಮೊದಲು ಸಿರಿಂಜ್ನ ಪ್ರಾಮುಖ್ಯತೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ಸಿರಿಂಜ್ಗಳ ಕೊರತೆಯಿಂದಾಗಿಯೇ ಕೊವಿಡ್-19 ಲಸಿಕೆ ಅಭಿಯಾನಕ್ಕೆ ತಡೆಯಾದಾಗ ಸಿರಿಂಜ್ ಪ್ರಾಮುಖ್ಯತೆ ತಿಳಿದುಬಂತು.
ಚಂಡೀಗಡ: ನಿಮಿಷಕ್ಕೆ ಸುಮಾರು 8,000 ಸಿರಿಂಜ್ಗಳ ಉತ್ಪಾದನೆ ಮಾಡಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇದೆ ಎನ್ನುತ್ತಿರುವ ಹರ್ಯಾಣ ಮೂಲದ ಸಿರಿಂಜ್ ತಯಾರಕ ಸಂಸ್ಥೆ ಹಿಂದೂಸ್ತಾನ್ ಸಿರಿಂಜ್ಸ್ ಮತ್ತು ಮೆಡಿಕಲ್ ಡಿವೈಸಸ್ (HMD), ‘ಕೊವಿಡ್ ಲಸಿಕೆ ನೀಡಲು ಸೂಕ್ತ ಸಿರಿಂಜ್ ನೀಡಿ’ ಎಂದು ಕೇಳಿ, ವಿದೇಶಗಳಿಂದ ಪ್ರತಿನಿತ್ಯ ಬರುವ ಸುಮಾರು 40 ಇಮೇಲ್ಗಳನ್ನು ತಿರಸ್ಕರಿಸುತ್ತಿದೆ. ಭಾರತದಲ್ಲಿ ತಯಾರಾಗುತ್ತಿರುವ ಸಿರಿಂಜ್ಗೆ ಜಾಗತಿಕ ಮಟ್ಟದಲ್ಲಿ ಎಷ್ಟು ಬೇಡಿಕೆ ಇದೆ ಎಂದು ಇದರಿಂದ ತಿಳಿಯಬಹುದು.
ಕೊರೊನಾ ಲಸಿಕೆ ವಿತರಣಾ ಅಭಿಯಾನ ವಿಶ್ವದ ವಿವಿಧ ದೇಶಗಳಲ್ಲಿ ಆರಂಭವಾಗುವ ಮೊದಲು ಸಿರಿಂಜ್ನ ಪ್ರಾಮುಖ್ಯತೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ಸಿರಿಂಜ್ಗಳ ಕೊರತೆಯಿಂದಾಗಿಯೇ ಕೊವಿಡ್-19 ಲಸಿಕೆ ಅಭಿಯಾನಕ್ಕೆ ತಡೆಯಾದಾಗ ಸಿರಿಂಜ್ ಪ್ರಾಮುಖ್ಯತೆ ತಿಳಿದುಬಂತು. ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿ (AIMED) ಮಾಹಿತಿಯಂತೆ, ಸದ್ಯ ಜಾಗತಿಕ ಮಟ್ಟದಲ್ಲಿ 800 ರಿಂದ 1,000 ಕೋಟಿ ಸಿರಿಂಜ್ಗಳ ಅಗತ್ಯವಿದೆ. ವಿಶ್ವದ ಶೇ. 60ರಷ್ಟು ಜನರಿಗೆ ಕೊರೊನಾ ಲಸಿಕೆ ವಿತರಿಸಲು ಇಷ್ಟು ಪ್ರಮಾಣದ ಸಿರಿಂಜ್ ಬೇಕಾಗಿದೆ.
ನಮ್ಮ ಸಂಸ್ಥೆಯ ರಫ್ತು ವಿಭಾಗ 40ಕ್ಕೂ ಅಧಿಕ ಇಮೈಲ್ಗಳನ್ನು ಪ್ರತಿನಿತ್ಯ ಪಡೆಯುತ್ತಿದೆ. ಯುಎಸ್, ಜರ್ಮನಿ, ಇಟೆಲಿ, ಸ್ಪೈನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಿಂದ ಸಿರಿಂಜ್ಗೆ ಬೇಡಿಕೆ ಬರುತ್ತಿದೆ ಎಂದು HMD ವ್ಯವಸ್ಥಾಪಕ ನಿರ್ದೇಶಕ ರಾಜೀವ್ ನಾಥ್ ತಿಳಿಸಿದ್ದಾರೆ. ಬ್ರೆಜಿಲ್ ಮತ್ತು ಜಪಾನ್ ದೇಶಗಳೂ ಕಡಿಮೆ ಪ್ರಮಾಣದಲ್ಲಿ ಲಸಿಕೆ ನಷ್ಟವಾಗುವಂಥ ಸಿರಿಂಜ್ಗಳಿಗೆ ಬೇಡಿಕೆ ಇಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.
ಸಿರಿಂಜ್ ತಯಾರಿಸುವ ವಿಶ್ವದ ವಿವಿಧ ಹೆಸರಾಂತ ಕಂಪೆನಿಗಳು ತಮ್ಮ ಹಳೆಯ ಕ್ಲೈಂಟ್ಗಳಿಗೆ ಮಾತ್ರ ಸಿರಿಂಜ್ ರಫ್ತು ಮಾಡುತ್ತಿವೆ. ಬೇಡಿಕೆ ಅಧಿಕವಾಗಿರುವುದರಿಂದ ಇತರ ದೇಶಗಳಿಗೆ ಸಿರಿಂಜ್ ಪೂರೈಕೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸುತ್ತಿವೆ. ಹರ್ಯಾಣ ಫರಿದಾಬಾದ್ ಬಲ್ಲಭ್ಘರ್ನಲ್ಲಿರುವ HMD ಸಂಸ್ಥೆ ಭಾರತ ಸಿರಿಂಜ್ ವಿಚಾರದಲ್ಲಿ ಚಿಂತೆ ಮಾಡಬೇಕಾದ್ದಿಲ್ಲ. ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಕನಿಷ್ಠ ಪಕ್ಷ ಈ ವರ್ಷದ ಮಧ್ಯಾವಧಿಯ ವರೆಗೆ ಪೂರೈಕೆ ಮಾಡುವಷ್ಟು ಸಿರಿಂಜ್ಗಳು ತಯಾರಾಗಿವೆ ಎಂದು ರಾಜೀವ್ ನಾಥ್ ಹೇಳಿದ್ದಾರೆ.
ಸಿರಿಂಜ್ ಸಂಗ್ರಹ ಪ್ರಮಾಣ ಇನ್ನಷ್ಟು ಹೆಚ್ಚಿಸಲು, ಲಸಿಕೆ ವಿತರಣಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕಂಪೆನಿ ನಿಮಿಷಕ್ಕೆ 8,200 ಸಿರಿಂಜ್ ಉತ್ಪಾದಿಸಲು ಯೋಜನೆ ಹಾಕಿಕೊಂಡಿದೆ. ಸದ್ಯ 5,900 ಸಿರಿಂಜ್ಗಳು ನಿಮಿಷಕ್ಕೆ ತಯಾರಾಗುತ್ತಿದ್ದು ಶೇ 40 ರಷ್ಟು ವೇಗದ ಗತಿ ಹೆಚ್ಚಾಗಬೇಕಿದೆ.
ಜಾಗತಿಕ ಬೇಡಿಕೆ ಈಡೇರಿಸಲು ಗಂಟೆಗೆ 5.25 ಲಕ್ಷ ಸಿರಿಂಜ್ ತಯಾರಿಗೆ ಸಿದ್ಧತೆ ಕೊವಿಡ್ ಪೂರ್ವ ಕಾಲದಲ್ಲಿ HMD ಕಂಪೆನಿಯು 70ರಿಂದ 80 ಶೇಕಡಾ ಉತ್ಪಾದನಾ ಸಾಮರ್ಥ್ಯ ಬಳಸಿ ವಾರ್ಷಿಕ 200ರಿಂದ 250 ಕೋಟಿ ಸಿರಿಂಜ್ಗಳನ್ನು ತಯಾರಿಸುತ್ತಿತ್ತು. ಆದರೆ, ಈ ವರ್ಷ ಸಂಸ್ಥೆ 270 ಕೋಟಿ ಸಿರಿಂಜ್ಗಳನ್ನು ಉತ್ಪಾದಿಸಿದೆ. ಜುಲೈ ಒಳಗಾಗಿ 300 ಕೋಟಿ ಸಿರಿಂಜ್ಗಳನ್ನು ತಯಾರಿಸಲು ಬಯಸುತ್ತದೆ ಎಂದು ರಾಜೀವ್ ನಾಥ್ ತಿಳಿಸಿದ್ದಾರೆ.
HMD ಕಂಪೆನಿ ಯುನೈಟೆಡ್ ನೇಷನ್ಸ್ ಏಜೆನ್ಸಿ ಫಾರ್ ಚಿಲ್ಡ್ರನ್ಗೆ ನಿಯಮಿತವಾಗಿ ಸಿರಿಂಜ್ ಸರಬರಾಜು ಮಾಡುತ್ತಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ದೇಶದ UNICEFನ ಕೆಲವಾರು ಯೋಜನೆಗಳಿಗೆ ಸಹಕಾರ ನೀಡುತ್ತದೆ. ಈ ಸೇವೆಯ ಆಧಾರದ ಮೇರೆಗೆ, ಕಳೆದ ನವೆಂಬರ್ನಲ್ಲಿ HMD ಕಂಪೆನಿಗೆ UNICEFನಿಂದ 14 ಕೋಟಿ ವಿಶೇಷ ಸಿರಿಂಜ್ಗೆ ಬೇಡಿಕೆ ಬಂದಿತ್ತು. ಯಾವತ್ತಿನ ಗ್ರಾಹಕರನ್ನು ಹೊರತುಪಡಿಸಿ HMD ಕಂಪೆನಿಗೆ, ಸಪ್ಟೆಂಬರ್ ಒಳಗಾಗಿ 26.5 ಕೋಟಿ ಸಿರಿಂಜ್ ನೀಡುವಂತೆ ಕೇಂದ್ರ ಸರ್ಕಾರದಿಂದ ಬೇಡಿಕೆ ಬಂದಿತ್ತು.
ಈ ಎಲ್ಲಾ ಬೇಡಿಕೆಗಳನ್ನು ಗಮನಿಸಿ, HMD ಕಂಪೆನಿ ಸಿರಿಂಜ್ ತಯಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಪ್ರಯತ್ನಿಸುತ್ತಿದೆ. ನಿಮಿಷಕ್ಕೆ 8,200 ಸಿರಿಂಜ್ಗಳನ್ನು ಉತ್ಪಾದಿಸಲು ತಯಾರಿ ನಡೆಸುತ್ತಿದೆ. ಗಂಟೆಗೆ 3.75 ಲಕ್ಷ ಸಿರಿಂಜ್ಗಳನ್ನು ಉತ್ಪಾದಿಸುತ್ತಿದ್ದೇವೆ. ಆದರೆ, ಈ ಪ್ರಮಾಣದಲ್ಲಿ ಸಪ್ಟೆಂಬರ್ ಒಳಗಾಗಿ ಶೇ. 25ರಿಂದ 40ರಷ್ಟು ಏರಿಕೆ ಕಾಣಲಿದೆ. ಅಂದರೆ, ಗಂಟೆಗೆ 4.68 ಲಕ್ಷ ಸಿರಿಂಜ್ಗಳು ಉತ್ಪಾದನೆ ಆಗಲಿವೆ. ಭಾರತಕ್ಕೆ ಸಿರಿಂಜ್ ಪೂರೈಕೆ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ರಾಜೀವ್ ನಾಥ್ ಹೇಳಿದ್ದಾರೆ.
ಮೂರನೇ ಎರಡು ಭಾಗದಷ್ಟು ಸಿರಿಂಜ್ಗಳನ್ನು ಭಾರತಕ್ಕೆ ನೀಡುತ್ತೇವೆ. ಮೂರರಲ್ಲಿ ಒಂದು ಭಾಗದಷ್ಟು ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವಲ್ಲಿಗೆ ಸಿರಿಂಜ್ ನೀಡುತ್ತೇವೆ. ಕೊರೊನಾ ಲಸಿಕೆ ಅಭಿಯಾನ ಹೊರತಾಗಿ ಹಳದಿ ಜ್ವರ, ಮತ್ತಿತರ ಖಾಯಿಲೆಗಳಿಗೂ ಸಿರಿಂಜ್ ನೀಡುತ್ತೇವೆ ಎಂದು ನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಕೊರೊನಾ ಹಬ್ಬಲು ಮುಖ್ಯ ಕಾರಣವೆಂದರೆ…’: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ
Published On - 8:39 pm, Mon, 15 March 21