ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿದ ಸರ್ಫರಾಝ್ ಖಾನ್
India tour of England, 2025: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ವಿಶೇಷ ಎಂದರೆ ಈ ಸರಣಿಯ ಮೂಲಕ ಶುಭ್ಮನ್ ಗಿಲ್ ಭಾರತ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.

ಇಂಗ್ಲೆಂಡ್ನ ಬೆಕನ್ಹ್ಯಾಮ್ನಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಭಾರತ ನಡುವಣ ಅಭ್ಯಾಸ ಪಂದ್ಯದಲ್ಲಿ ಸರ್ಫರಾಝ್ ಖಾನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದ ಸರ್ಫರಾಝ್ ಆಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಅದರಲ್ಲೂ ಟೀಮ್ ಇಂಡಿಯಾದಲ್ಲಿರುವ ಅನುಭವಿ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ನಿರಾಯಾಸವಾಗಿ ಎದುರಿಸಿದ ಸರ್ಫರಾಝ್, ಮೈದಾನದ ಮೂಲೆ ಮೂಲೆಗೆ ಫೋರ್ಗಳನ್ನು ಬಾರಿಸಿದರು. ಈ ಮೂಲಕ ಅಜೇಯ 101 ರನ್ ಬಾರಿಸಿದರು.
ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರೆ, ಅಭಿಮನ್ಯು ಈಶ್ವರನ್ 39 ರನ್ ಬಾರಿಸಿದರು. ಇನ್ನು ಸಾಯಿ ಸುದರ್ಶನ್ 38 ರನ್ಗಳ ಕೊಡುಗೆ ನೀಡಿದರು. ಇನ್ನು ಇಶಾನ್ ಕಿಶನ್ 45 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರೆ, ವಾಷಿಂಗ್ಟನ್ ಸುಂದರ್ 35 ರನ್ ಕಲೆಹಾಕಿದರು.
ಇದಾಗ್ಯೂ ಟೀಮ್ ಇಂಡಿಯಾ ಪರ ಮಿಂಚಿನ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದುವೇ ಈಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಯುವ ಪಡೆಯನ್ನು ಒಳಗೊಂಡಿರುವ ಭಾರತ ತಂಡದ ಹಿರಿಯ ಆಟಗಾರನಾಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಬುಮ್ರಾ ಅವರ ಪ್ರದರ್ಶನ ನಿರ್ಣಾಯಕ. ಆದರೆ ಭಾರತ ಎ ತಂಡದ ವಿರುದ್ಧ ಯಾರ್ಕರ್ ಸ್ಪೆಷಲಿಸ್ಟ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಇದೀಗ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದೆ.
ಕೆಎಲ್ ರಾಹುಲ್ ಮಿಂಚಿಂಗ್:
ಇದಕ್ಕೂ ಮುನ್ನ ನಡೆದ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಅತ್ತ ಭರ್ಜರಿ ಫಾರ್ಮ್ನಲ್ಲಿರುವ ರಾಹುಲ್ ಅವರನ್ನು ಈ ಬಾರಿ ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಏಕೆಂದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿಯಬಹುದು. ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಸರ್ಫರಾಝ್ ಖಾನ್ಗೆ ಇಲ್ಲ ಚಾನ್ಸ್:
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸರ್ಫರಾಝ್ ಖಾನ್ 92 ರನ್ ಬಾರಿಸಿ ಮಿಂಚಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಜೇಯ 101 ರನ್ ಸಿಡಿಸಿ ಅಬ್ಬರಿಸಿದ್ದಾರೆ. ವಿಶೇಷ ಎಂದರೆ ಸರ್ಫರಾಝ್ ಖಾನ್ ಟೀಮ್ ಇಂಡಿಯಾದ ಭಾಗವಾಗಿಲ್ಲ. ಹೀಗಾಗಿ ಜೂನ್ 20 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸರ್ಫರಾಝ್ ಖಾನ್ ಕಾಣಿಸಿಕೊಳ್ಳುವುದಿಲ್ಲ.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
- 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
- 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
- 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್.
ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್
