Kerala Rains: ಕೇರಳದಲ್ಲಿ ಭಾರೀ ಮಳೆಯ ಆರ್ಭಟ; 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಕೇರಳದ 5 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಹೊರಡಿಸಿದೆ. ಕೇರಳದ ಪಾಲಕ್ಕಾಡ್, ಎರ್ನಾಕುಲಂ, ತ್ರಿಶೂರ್, ಇಡುಕ್ಕಿ, ಕೊಟ್ಟಾಯಂ ಮತ್ತು ಪಥನಾಂತಿಟ್ಟ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆ ಮತ್ತು ಬಲವಾದ ಗಾಳಿ ಬೀಸಿದ್ದು, ಹಲವು ಸ್ಥಳಗಳಲ್ಲಿ ಮರಗಳು ಉರುಳಿ, ಮನೆಗಳಿಗೆ ಹಾನಿಯಾದ ಘಟನೆಗಳು ಸಂಭವಿಸಿವೆ.

ತಿರುವನಂತಪುರಂ, ಜೂನ್ 14: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಕೇರಳ (Kerala Rain Updates) ರಾಜ್ಯದ ಐದು ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಅಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಿದೆ. ಪಾಲಕ್ಕಾಡ್, ಎರ್ನಾಕುಲಂ, ತ್ರಿಶೂರ್, ಇಡುಕ್ಕಿ, ಕೊಟ್ಟಾಯಂ ಮತ್ತು ಪಥನಾಂತಿಟ್ಟ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂ, ಕೊಲ್ಲಂ ಮತ್ತು ಅಲಪ್ಪುಳದಲ್ಲಿ ಹಳದಿ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ನೀಡಲಾಗಿದ್ದು, 11 ಸೆಂ.ಮೀ.ನಿಂದ 20 ಸೆಂ.ಮೀ.ವರೆಗಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳದ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಜೂನ್ 17ರವರೆಗೆ ಕೇರಳದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 20 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ. ಜೂನ್ 18ರಂದು ಕೇರಳದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 7-11 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ. ಜೂನ್ 15ರಂದು ಲಕ್ಷದ್ವೀಪದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 7-11 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರೂ ಅವಾಂತರಗಳು ನಿಲ್ಲುತ್ತಿಲ್ಲ: ಕುಸಿಯುತ್ತಿರುವ ಗುಡ್ಡಗಳು
ಸುಮಾರು ಎರಡು ವಾರಗಳ ಬಿಡುವು ನೀಡಿದ್ದ ನೈಋತ್ಯ ಮಾನ್ಸೂನ್ ಮತ್ತೆ ಸಕ್ರಿಯವಾಗಿದೆ. ಗುರುವಾರ ಮುಂಜಾನೆ ಕರ್ನಾಟಕದ ಹಲವಾರು ಭಾಗಗಳಲ್ಲಿ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕಕ್ಕೆ 7 ದಿನಗಳ ಎಚ್ಚರಿಕೆ ನೀಡಿದ್ದು, ಜೂನ್ 17ರವರೆಗೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಜೂನ್ 17ರವರೆಗೆ ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ವ್ಯಾಪಕವಾಗಿ ಮುಂದುವರಿಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




