ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಹೊತ್ತೊಯ್ಯುವ ಆಕ್ಸಿಯಮ್-4 ಮಿಷನ್ ಜೂನ್ 19ಕ್ಕೆ ಉಡಾವಣೆ
ಆಕ್ಸಿಯಮ್ ಸ್ಪೇಸ್ ಮಿಷನ್ ಜೂನ್ 11ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ಇಂಧನ ಸೋರಿಕೆ ಮತ್ತು ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ರಷ್ಯಾದ ವಿಭಾಗದಲ್ಲಿ ಸೋರಿಕೆಯಿಂದಾಗಿ ಉಡಾವಣೆ ವಿಳಂಬವಾಯಿತು. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶಯಾನಕ್ಕೆ ಹೊಸ ದಿನಾಂಕ ನಿಗದಿಯಾಗಿದ್ದು, ಜೂನ್ 19ರಂದು ಸ್ಪೇಸ್-ಎಕ್ಸ್ನ ಫಾಲ್ಕನ್ 9 ರಾಕೆಟ್ ಉಡಾವಣೆಯಾಗಲಿದೆ. ಈ ರಾಕೆಟ್ ಉಡಾವಣೆಗೆ ಇಸ್ರೋ ಹೊಸ ದಿನಾಂಕ ನಿಗದಿ ಮಾಡಿದೆ.

ನವದೆಹಲಿ, ಜೂನ್ 14: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಮುಂಬರುವ ಮಿಷನ್ ಜೂನ್ 19ರಂದು ಉಡಾವಣೆಗೊಳ್ಳಲಿದೆ. ಜೂನ್ 11ಕ್ಕೆ ಈ ಮಿಷನ್ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಅದು ಮುಂದೂಡಲ್ಪಟ್ಟಿತ್ತು. ಈಗ ಫಾಲ್ಕನ್ 9 ರಾಕೆಟ್‌ನಲ್ಲಿನ ದ್ರವ ಆಮ್ಲಜನಕ ಸೋರಿಕೆಯನ್ನು ಆಕ್ಸಿಯಮ್ ಸ್ಪೇಸ್ ಕಂಪನಿ ಯಶಸ್ವಿಯಾಗಿ ಪರಿಹರಿಸಿದೆ ಎಂದು ಇಸ್ರೋ (ISRO) ಘೋಷಿಸಿದೆ. ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್‌ನೊಂದಿಗಿನ ಸಭೆಯಲ್ಲಿ ಫಾಲ್ಕನ್ 9 ಉಡಾವಣಾ ವಾಹನದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆ ಎಂದು ತಂಡಗಳು ಸ್ಪಷ್ಟಪಡಿಸಿವೆ ಎಂದು ಇಸ್ರೋ ದೃಢಪಡಿಸಿದೆ. ಹಾಗೇ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಜ್ವೆಜ್ಡಾ ಸೇವಾ ಮಾಡ್ಯೂಲ್‌ನಲ್ಲಿನ ಒತ್ತಡವನ್ನು ನಿರ್ಣಯಿಸಲು ನಾಸಾದೊಂದಿಗೆ (NASA) ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿದೆ.
ಜೂನ್ 11ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ ಸ್ಪೇಸ್ ಮಿಷನ್ ಉಡಾವಣೆಗೊಳ್ಳಬೇಕಿತ್ತು. ಆದರೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್‌ನಲ್ಲಿ ಇಂಧನ ಸೋರಿಕೆ ಮತ್ತು ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ರಷ್ಯಾದ ವಿಭಾಗದಲ್ಲಿ ಸೋರಿಕೆಯಿಂದಾಗಿ ಮೊದಲು ವಿಳಂಬವಾಯಿತು. ಈ ಆಕ್ಸಿಯಮ್ ಸ್ಪೇಸ್ ಮಿಷನ್‌ನಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೂಡ ಇದ್ದಾರೆ. ಶುಭಾಂಶು ಅವರನ್ನೊಳಗೊಂಡು 4 ಗಗನಯಾತ್ರಿಗಳನ್ನು ಹೊತ್ತೊಯ್ಯುವ ಈ ಮಿಷನ್ ಅನ್ನು ಮೇ 29ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಂತರ ಜೂನ್ 8, ಜೂನ್ 10 ಮತ್ತು ಜೂನ್ 11ಕ್ಕೆ ಆ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Shubhanshu Shukla: 4 ದಶಕಗಳ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿರುವ ಮೊದಲ ಭಾರತೀಯ ಶುಭಾಂಶು ಶುಕ್ಲ; ಸಂಪೂರ್ಣ ಮಾಹಿತಿ
ಮಾಜಿ ನಾಸಾ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ. ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಸೇವೆ ಸಲ್ಲಿಸಲಿದ್ದಾರೆ. ನಾಸಾ ಮತ್ತು ಸ್ಪೇಸ್‌ಎಕ್ಸ್ ಸಹಯೋಗದೊಂದಿಗೆ ಆಕ್ಸಿಯಮ್ ಸ್ಪೇಸ್ ಆಯೋಜಿಸಿರುವ ಈ ಮಿಷನ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ವಾಣಿಜ್ಯಿಕವಾಗಿ ಸಿಬ್ಬಂದಿಯೊಂದಿಗೆ ಬಾಹ್ಯಾಕಾಶ ಹಾರಾಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು ಶುಭಾಂಶು ಶುಕ್ಲಾ ಸಿದ್ಧತೆ ನಡೆಸುತ್ತಿರುವುದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನಗಳಲ್ಲಿ ಭಾರತದ ಉಪಸ್ಥಿತಿಗೆ ಇದು ಮಹತ್ವದ ಮೈಲಿಗಲ್ಲು.
ಆಕ್ಸಿಯಮ್ -4 (ಆಕ್ಸ್ -4) ಮಿಷನ್‌ನಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಜೊತೆ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ ಮತ್ತು ತಜ್ಞರಾದ ಹಂಗೇರಿಯ ಟಿಗೋರ್ ಕಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಕೂಡ ಇದ್ದಾರೆ. ಬಾಹ್ಯಾಕಾಶದಲ್ಲಿ 14 ದಿನಗಳ ವಾಸ್ತವ್ಯದ ಅವಧಿಯಲ್ಲಿ Ax-4 ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉದ್ಯಮದ ಪ್ರಮುಖರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ