ಪಾಲ್ಘರ್ನಲ್ಲಿ ಆಗಷ್ಟೇ ಹುಟ್ಟಿದ ಮಗು ಸಾವು; ಆ್ಯಂಬುಲೆನ್ಸ್ ಸಿಗದೆ ಚೀಲದಲ್ಲೇ 80 ಕಿ.ಮೀ. ಶವ ಹೊತ್ತು ಸಾಗಿದ ತಂದೆ
ಹಳ್ಳಿಗಳಲ್ಲಿ ಸೂಕ್ತ ರೀತಿಯ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಆ್ಯಂಬುಲೆನ್ಸ್ ಬಾರದ ಕಾರಣದಿಂದ ಸಾವನ್ನಪ್ಪಿದ್ದ ತಮ್ಮ ನವಜಾತ ಶಿಶುವಿನ ಶವವನ್ನು ತಂದೆ ಚೀಲದಲ್ಲಿ ಹಾಕಿಕೊಂಡು 80 ಕಿ.ಮೀ ಹೊತ್ತುಕೊಂಡು ಹೋಗಿದ್ದಾರೆ. ಜೋಗಲ್ವಾಡಿ ಗ್ರಾಮದ 26 ವರ್ಷದ ಅವಿತಾ ಸಖಾರಾಮ್ ಕವರ್ ಅವರಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಕುಟುಂಬ ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿತು. ಆದರೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ತಿಳಿಸಲಾಯಿತು. ಬೆಳಿಗ್ಗೆ 8 ಗಂಟೆಯವರೆಗೆ ಫೋನ್ ಮಾಡಿದರೂ ಮಧ್ಯಾಹ್ನದವರೆಗೂ ಆ್ಯಂಬುಲೆನ್ಸ್ ಬರಲಿಲ್ಲ.

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ನ ಹಳ್ಳಿಯಲ್ಲಿ ದುರಂತ ಘಟನೆಯೊಂದು (Shocking News) ನಡೆದಿದೆ. ಪಾಲ್ಘರ್ ಜಿಲ್ಲೆಯ ಮೊಖಡಾದಲ್ಲಿ ಗರ್ಭಿಣಿ ಮಹಿಳೆಗೆ ಸಕಾಲಿಕ ಆಂಬ್ಯುಲೆನ್ಸ್ ಸೇವೆ ಸಿಗದೆ ನವಜಾತ ಶಿಶುವೊಂದು ದುರಂತವಾಗಿ ಸಾವನ್ನಪ್ಪಿದೆ. ಹೆರಿಗೆ ನೋವು ಬಂದ ನಂತರ ಆಕೆ 15 ಗಂಟೆಗಳ ಕಾಲ ಕಷ್ಟ ಅನುಭವಿಸಬೇಕಾಯಿತು. ಆಕೆಯಿದ್ದ ಊರಿನಲ್ಲಿ ಸಾರಿಗೆ ಕೊರತೆ ಮತ್ತು ಅವರ ಆರ್ಥಿಕ ಸಂಕಷ್ಟದಿಂದಾಗಿ ಆಕೆಯ ಗಂಡ ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು 80 ಕಿ.ಮೀ ದೂರದ ಮನೆಗೆ ಸಾರ್ವಜನಿಕ ಬಸ್ ಮೂಲಕ ಪ್ರಯಾಣ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಆ ಗರ್ಭಿಣಿ ಮಹಿಳೆಯ ನವಜಾತ ಶಿಶು ಹುಟ್ಟಿದ ಕೂಡಲೆ ಮೃತಪಟ್ಟಿದೆ. ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಆ ಮಗುವಿನ ತಾಯಿ ಅದೃಷ್ಟವಶಾತ್ ಬದುಕುಳಿದ್ದಾರೆ. ಜಯ ಮಕ,
ತುರ್ತು ವೈದ್ಯಕೀಯ ವಾಹನಗಳು ತಕ್ಷಣ ಬಂದಿದ್ದರೆ ತಮ್ಮ ಮಗುವನ್ನು ಉಳಿಸಬಹುದಿತ್ತು ಎಂದು ಕುಟುಂಬವು ಆರೋಪಿಸಿದೆ. ಈ ಆಘಾತಕಾರಿ ಘಟನೆಯು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಜೋಗಲ್ವಾಡಿ ಗ್ರಾಮದ 26 ವರ್ಷದ ಅವಿತಾ ಸಖಾರಾಮ್ ಅವರಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆರಿಗೆ ನೋವು ಶುರುವಾಯಿತು. ಅವರ ಕುಟುಂಬವು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿತು. ಆದರೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ತಿಳಿಸಲಾಯಿತು. ಬೆಳಿಗ್ಗೆ 8 ಗಂಟೆಯವರೆಗೂ ಮತ್ತೆ ಮತ್ತೆ ಕರೆ ಮಾಡಲಾಯಿತು. ಮಧ್ಯಾಹ್ನವಾದರೂ ಯಾವುದೇ ಸಹಾಯ ಬರಲಿಲ್ಲ.
ಇದನ್ನೂ ಓದಿ: ‘ಮನೇಲಿ ಯಾರಿಲ್ಲ ಬಾ’: ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕೊಲೆ ರಹಸ್ಯ ಕೊನೆಗೂ ಭೇದಿಸಿದ ಕಲಬುರಗಿ ಪೊಲೀಸರು
ಹೀಗಾಗಿ, ಬೇರೆ ದಾರಿಯಿಲ್ಲದೆ ಆಕೆಯ ಕುಟುಂಬವು ಅವಳನ್ನು ಖೋಡಾಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಖಾಸಗಿ ವಾಹನವನ್ನು ವ್ಯವಸ್ಥೆ ಮಾಡಿತು. ಅಲ್ಲಿ, ಅವಳನ್ನು ಮೊಖಾಡಾ ಗ್ರಾಮೀಣ ಆಸ್ಪತ್ರೆಗೆ ವರ್ಗಾಯಿಸಬೇಕೆಂದು ವೈದ್ಯರು ನಿರ್ಧರಿಸಿದರು. ಆಗಲೂ ಸ್ಥಳೀಯ ಆರೋಗ್ಯ ಉಪಕೇಂದ್ರದಿಂದ ವಿನಂತಿಸಿದ ನಂತರವೂ ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಅಂತಿಮವಾಗಿ, ಸಂಜೆ 6 ಗಂಟೆಯ ಹೊತ್ತಿಗೆ ಅಂದರೆ ಆಕೆಗೆ ಹೆರಿಗೆ ನೋವು ಪ್ರಾರಂಭವಾದ 15 ಗಂಟೆಗಳ ನಂತರ ಅವಿತಾ ಅವರನ್ನು ಮೊಖಾಡಾ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಯಿತು. ಗರ್ಭದಲ್ಲೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಆಪರೇಷನ್ ಮೂಲಕ ಹೊರಗೆ ತೆಗೆಯಲಾಯಿತು. ಆದರೆ, ಆ ಮಗು ಹುಟ್ಟಿದ ಕೂಡಲೆ ಸಾವನ್ನಪ್ಪಿತು. ನಂತರ ಅವಿತಾಳನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ನಾಸಿಕ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಯಶಸ್ವಿಯಾಗಿ ಆಪರೇಷನ್ ಮಾಡಿ ಆಕೆಯ ಜೀವವನ್ನು ಉಳಿಸಿದರು.
ಇದನ್ನೂ ಓದಿ: ಮದುವೆಯಾಗಿ ಮೂರೇ ವಾರಕ್ಕೆ ಕೊಡಲಿಯಿಂದ ಗಂಡನ ಪ್ರಾಣ ತೆಗೆದ ಹೆಂಡತಿ
ಇದಿಷ್ಟೇ ಅಲ್ಲ, ಇನ್ನು ಮುಂದೆ ನಡೆದ ಘಟನೆಗಳು ಸುತ್ತಮುತ್ತಲಿನವರನ್ನು ಬೆಚ್ಚಿಬೀಳಿಸಿದೆ. ಹೆರಿಗೆಯ ನಂತರ, ಮೃತ ನವಜಾತ ಶಿಶುವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯು ಅವರಿಗೆ ಆ್ಯಂಬುಲೆನ್ಸ್ ಅಥವಾ ಬೇರಾವುದೇ ವಾಹನದ ವ್ಯವಸ್ಥೆಗಳನ್ನು ಮಾಡಲಿಲ್ಲ. ಹೀಗಾಗಿ, ಅವಿತಾಳ ಗಂಡ ಸಖಾರಾಮ್ ಸಾವನ್ನಪ್ಪಿದ ತನ್ನ ಶಿಶುವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿಕೊಂಡು, ಅದರ ಅಂತ್ಯಕ್ರಿಯೆಗೆ ಬಸ್ನಲ್ಲಿಯೇ 80 ಕಿ.ಮೀ ದೂರದ ಮನೆಗೆ ಪ್ರಯಾಣಿಸಿದ್ದಾರೆ. ಖಾಸಗಿ ವಾಹನವನ್ನು ಬಾಡಿಗೆಗೆ ಪಡೆಯಲು ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಹಣವಿಲ್ಲದೆ ತನ್ನ ಮಗುವಿನ ಪುಟ್ಟ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಸಾರ್ವಜನಿಕ ಬಸ್ ಹತ್ತಿದ್ದಾರೆ. ನಂತರ ಊರಿನಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.
ಅವಿತಾಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ತಾಯಿ-ಮಗು ಇಬ್ಬರೂ ಆರೋಗ್ಯವಾಗಿರುತ್ತಿದ್ದರು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಎಷ್ಟೇ ಆಧುನಿಕ ವ್ಯವಸ್ಥೆಗಳು ಬಂದಿದ್ದರೂ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗದೆ ಸಾಯುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Sat, 14 June 25




