AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೇಲಿ ಯಾರಿಲ್ಲ ಬಾ’: ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕೊಲೆ ರಹಸ್ಯ ಕೊನೆಗೂ ಭೇದಿಸಿದ ಕಲಬುರಗಿ ಪೊಲೀಸರು

ಆಳಂದ ತಾಲ್ಲೂಕಿನ ಆನೂರು ಗ್ರಾಮದಲ್ಲಿ ನಡೆದ ರಾಹುಲ್ ಎಂಬ ಯುವಕನ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ರಾಹುಲ್​ನ ಪ್ರೇಯಸಿಯ ಅಣ್ಣ ಪೃಥ್ವಿರಾಜ್​ನೇ ಕೊಲೆ ಮಾಡಿ, ಕುಟುಂಬದೊಂದಿಗೆ ಕುಂಭಮೇಳಕ್ಕೆ ತೆರಳಿದ್ದ. ಅಲ್ಲಿಂದ ಕಾಶಿ, ಅಯೋಧ್ಯೆ ಎಂದು ತಲೆಮರೆಸಿಕೊಂಡಿದ್ದವರು ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

‘ಮನೇಲಿ ಯಾರಿಲ್ಲ ಬಾ’: ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕೊಲೆ ರಹಸ್ಯ ಕೊನೆಗೂ ಭೇದಿಸಿದ ಕಲಬುರಗಿ ಪೊಲೀಸರು
ಕೊಲೆ ರಹಸ್ಯ ಕೊನೆಗೂ ಬೇಧಿಸಿದ ಕಲಬುರಗಿ ಪೊಲೀಸರು
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Ganapathi Sharma|

Updated on: Jun 14, 2025 | 11:26 AM

Share

ಕಲಬುರಗಿ, ಜೂನ್ 14: ‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಊಟವನ್ನೂ ಅರ್ಧಕ್ಕೆ ಬಿಟ್ಟು ಆತ ಹೋಗಿದ್ದ. ಆದರೆ, ವಾಪಸ್ ಬರಲೇ ಇಲ್ಲ! ಪ್ರೇಯಸಿಯ ಅಣ್ಣನೇ ಆತನನ್ನು ನೇರವಾಗಿ ಮತ್ತೆ ಬಾರದ ಲೋಕಕ್ಕೆ ಕಳುಹಿಸಿದ್ದ. ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು ತಂಗಿ ಮತ್ತು ತಾಯಿಯನ್ನು ಕರೆದುಕೊಂಡು ಸುತ್ತಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಇಂಥದ್ದೊಂದು ಕೃತ್ಯಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲ್ಲೂಕಿನ ಆನೂರು ಗ್ರಾಮ.

ಜನವರಿ 30 ರಂದು ಆನೂರು ಗ್ರಾಮದಲ್ಲಿ ಖಜೂರಿ ಗ್ರಾಮದ ರಾಹುಲ್ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದ ನಂತರ ಯಾರಿಗೂ ಗೊತ್ತಾಗದಂತೆ ಹಂತಕ ಪೃಥ್ವಿರಾಜ್, ಸ್ನೇಹಿತನ ಬೈಕ್ ಮೇಲೆ ಶವ ಸಾಗಿಸಿ ಮಹಾರಾಷ್ಟ್ರದ ಸಾಂಗ್ವಿ ಬಳಿ ಬೆಣ್ಣೆತೋರಾ ಹಿನ್ನಿರಿನಲ್ಲಿ ಶವಕ್ಕೆ ದೊಡ್ಡ ಕಲ್ಲು ಕಟ್ಟಿ ಎಸೆದಿದ್ದ. ಆ ನಂತರ ಹಂತಕ ಪೃಥ್ವಿರಾಜ್, ಆತನ ಸಹೋದರಿ ಮತ್ತು ತಾಯಿ ಎಲ್ಲರೂ ಮಹಾಕುಂಭಮೇಳಕ್ಕೆ ಪ್ರಯಾಗ್​​ರಾಜ್​​ಗೆ ತೆರಳಿ ತಲೆ ಮರೆಸಿಕೊಂಡಿದ್ದರು. ಇತ್ತ ಮಗ ಮನೆಗೆ ಬರಲಿಲ್ಲ ಎಂದು, ಕೊಲೆಯಾದ ರಾಹುಲ್ ಕುಟುಂಬಸ್ಥರು ಆಳಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದೇ ರಾಹುಲ್ ಮತ್ತು ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿಯ ಲವ್ ಕಹಾನಿ!

ಆ ದಿನ ನಡೆದಿದ್ದೇನು?

ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಸಂತ್ರಸ್ತನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿದ್ದಾರೆ. ಆಗ, ಕೊಲೆಯ ಅಸಲಿತ್ತು ಪತ್ತೆಯಾಗಿದೆ.

ಇದನ್ನೂ ಓದಿ
Image
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
Image
ವಿಮಾನ ದುರಂತ ಘಟನೆ ಹೃದಯವಿದ್ರಾವಕ: ಅಹಮದಾಬಾದ್ ಭೇಟಿ ಬಳಿಕ ಪ್ರಧಾನಿ ಮೋದಿ
Image
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
Image
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ

‘ಯಾರೂ ಇಲ್ಲ ಮನೆಗೆ ಬಾ’ ಎಂದ ಲವರ್

ಅಂದಹಾಗೆ ಎ-1 ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿ ಮತ್ತು ರಾಹುಲ್ ಖಜೂರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಜನವರಿ 30 ರಂದು ರಾತ್ರಿ ಸುಮಾರು 8:30 ರ ವೇಳೆಗೆ ಭಾಗ್ಯವಂತಿ ರಾಹುಲ್​​ಗೆ ಕರೆ ಮಾಡಿ, ‘‘ಮನೆಯವರು ಊರಿಗೆ ಹೋಗಿದ್ದಾರೆ. ಯಾರೂ ಇಲ್ಲ ಬಾ’’ ಎಂದು ಕರೆದಿದ್ದಾಳೆ. ಭಾಗ್ಯವಂತಿ ಕರೆಯ ಬೆನ್ನಲ್ಲೇ ರಾಹುಲ್ ಊಟ ಮಾಡುವುದನ್ನೂ ಬಿಟ್ಟು ಆನೂರು ಗ್ರಾಮಕ್ಕೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಏಕಾಏಕಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆಗಮಿಸಿದ್ದಾನೆ. ಭಾಗ್ಯವಂತಿ ಮತ್ತು ರಾಹುಲ್ ಒಟ್ಟಿಗೆ ಇರುವುದನ್ನು ಕಂಡು ರೊಚ್ಚಿಗೆದ್ದ ಪೃಥ್ವಿರಾಜ್ ತಂಗಿಗೆ ಬೈದು, ರಾಹುಲ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು, ಸುಳಿವು ಸಿಗಬಾರದು ಎಂದು ಸ್ನೇಹಿತನಿಗೆ ಕರೆ ಮಾಡಿ ಆತನ ಬೈಕ್​ನಲ್ಲಿಯೇ ರಾಹುಲ್ ಶವ ಇಟ್ಟುಕೊಂಡು ಹೋಗಿ ಬೆಣ್ಣೆತೋರಾ ಹಿನ್ನಿರಿನಲ್ಲಿ ಕಲ್ಲು ಕಟ್ಟಿ ಹಾಕಿ ಪರಾರಿಯಾಗಿದ್ದಾನೆ.

ಕುಟುಂಬಸಮೇತ ತೀರ್ಥಯಾತ್ರೆ

ಇಷ್ಟೆಲ್ಲ ಆದ ನಂತರ, ಸಹೋದರಿ ಭಾಗ್ಯವಂತಿ ಮತ್ತು ತಾಯಿ ಸೀತಾಬಾಯಿ ಜತೆಗೂಡಿ ಪೃಥ್ವಿರಾಜ್ ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ ಹೋಗಿದ್ದಾನೆ. ಪೊಲೀಸರಿಗೆ ಸುಳಿವೇ ಸೀಗಬಾರದು ಎಂದು ಮೊಬೈಲ್ ಕೂಡ ಬಳಸಿಲ್ಲ. ಪ್ರಯಾಗರಾಜ್, ಕಾಶಿ, ಅಯೋಧ್ಯೆ, ಪಂಢರಾಪುರ ಹೀಗೆ ಬೇರೆ ಬೇರೆ ಕಡೆ ಪುಣ್ಯಕ್ಷೇತ್ರಗಳಿಗೆ ಓಡಾಡುತ್ತ ತಲೆ ಮರೆಸಿಕೊಂಡಿದ್ದರು.

ವಕೀಲರ ಭೇಟಿಗೆ ಬಂದಾಗ ಖಾಕಿ ಖೆಡ್ಡಾಕ್ಕೆ ಬಿದ್ದ ಆರೋಪಿಗಳು

ತೀರ್ಥಯಾತ್ರೆಯ ಮಧ್ಯೆ, ಜಾಮೀನು ಪಡೆಯುವುದಕ್ಕಾಗಿ ವಕೀಲರನ್ನು ಭೇಟಿಯಾಗಲೆಂದು ಆರೋಪಿಗಳು ಊರಿಗೆ ಬಂದಿದ್ದಾರೆ. ಇದೇ ವೇಳೆ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ರಾಹುಲ್ ಕೊಲೆ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಎಸ್​​ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಎಪಿಎಂಸಿ ವರ್ತಕರಿಗೆ 15 ಕೋಟಿ ರೂ. ಪಂಗನಾಮ ಹಾಕಿದ ದಾಲ್​ ಮಿಲ್‌ ಮಾಲೀಕ ಗೋವಿಂದ

ಒಟ್ಟಿನಲ್ಲಿ ಲವ್, ಸೆಕ್ಸ್, ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ನಾಲ್ಕು ತಿಂಗಳ ಬಳಿಕ ಬಯಲಿಗೆಳೆದಿದ್ದಾರೆ. ಕೊಲೆ ಮಾಡಿ ಪಾಪ ತೊಳೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಆರೋಪಿಗಳು ಹೋಗಿದ್ದರೂ ಸಹ ಮಾಡಿದ ಪಾಪ ಅವರ ಕೈಬಿಡಲೇ ಇಲ್ಲ. ಸದ್ಯ ಆರೋಪಿಗಳು ಜೈಲುಪಾಲಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ