Kannada News Photo gallery PM Modi Visits Ahmedabad Air India Plane Crash Site, Reviews Details and Shares Message
ವಿಮಾನ ದುರಂತ ಘಟನೆ ಹೃದಯವಿದ್ರಾವಕ: ಅಹಮದಾಬಾದ್ ಭೇಟಿ ಬಳಿಕ ಪ್ರಧಾನಿ ಮೋದಿ ಸಂದೇಶ
ಅಹಮದಾಬಾದ್, ಜೂನ್ 13: ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡ ಅಹಮದಾಬಾದ್‌ನ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು. ಅವರು, ಅಹಮದಾಬಾದ್ ಸಿವಿಲ್ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ದುರಂತದಲ್ಲಿ ಬದುಕುಳಿದಿದ್ದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದರು.
ಪ್ರಧಾನಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನೇರವಾಗಿ ಮೇಘನಾನಿ ನಗರ ಪ್ರದೇಶದ ಅಪಘಾತ ಸ್ಥಳಕ್ಕೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮಯದಲ್ಲಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಪ್ರಧಾನಿ ಜೊತೆಗಿದ್ದರು. ಮೇಘನಾನಿ ನಗರವು ವಿಮಾನ ಅಪಘಾತಕ್ಕೀಡಾದ ವಸತಿ ಪ್ರದೇಶವಾಗಿದೆ.
1 / 5
ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಮೊದಲು ಸ್ಥಳಕ್ಕೆ ತಲುಪಿತು. ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಿದರು. ಘಟನಾ ಸ್ಥಳವನ್ನು ತಲುಪಿದ ನಂತರ, ಪ್ರಧಾನಿ ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸ್ಥಳವನ್ನು ಪರಿಶೀಲಿಸಿದ ನಂತರ, ಪ್ರಧಾನಿ ಮೋದಿ ಗಾಯಾಳುಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದರು.
2 / 5
ಅಹಮದಾಬಾದ್‌ನಲ್ಲಿ ಅಪಘಾತ ಸ್ಥಳಕ್ಕೆ ಇಂದು ಭೇಟಿ ನೀಡಿದ್ದೇನೆ. ವಿನಾಶದ ದೃಶ್ಯವು ಹೃದಯವಿದ್ರಾವಕವಾಗಿದೆ. ದಣಿವರಿಯದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ತಂಡಗಳನ್ನು ಭೇಟಿ ಮಾಡಿದೆ. ಈ ಊಹಿಸಲಾಗದ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನಾವಿದ್ದೇವೆ ಎಂದು ಮೋದಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
3 / 5
ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಪತನ ದುರಂತದಿಂದ ನಾವೆಲ್ಲರೂ ದಿಗ್ಭ್ರಮೆಗೊಂಡಿದ್ದೇವೆ. ಹಠಾತ್ ಆಘಾತ ಮತ್ತು ಹಲವಾರು ಜೀವಗಳನ್ನು ಕಳೆದುಕೊಂಡಿರುವ ದುಃಖವನ್ನು ತಡೆಯಲಾಗುತ್ತಿಲ್ಲ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಅವರ ನೋವಿನ ಜತೆಗೆ ನಾವಿದ್ದೇವೆ. ಅವರ ಕುಟುಂಬಗಳಲ್ಲಿ ಸೃಷ್ಟಿಯಾಗಿರುವ ನಿರ್ವಾತದ ನೋವು ವರ್ಷಗಳ ವರೆಗೆ ಇರಲಿದೆ ಎಂಬುದು ನಮಗೆ ತಿಳಿದಿದೆ. ಅವರ ಜತೆಗೆ ನಾವಿದ್ದೇವೆ. ಓಂ ಶಾಂತಿ ಎಂದು ಮತ್ತೊಂದು ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
4 / 5
ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡಿತ್ತು. ಈ ಭೀಕರ ಅಪಘಾತದಲ್ಲಿ 265 ಜನರು ಮೃತಪಟ್ಟಿದ್ದರು.