ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರೂ ಅವಾಂತರಗಳು ನಿಲ್ಲುತ್ತಿಲ್ಲ: ಕುಸಿಯುತ್ತಿರುವ ಗುಡ್ಡಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದ್ದರೂ ಮಳೆಯಿಂದ ಸೃಷ್ಟಿಯಾದ ಅವಾಂತರ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಕಳೆದ ಕೆಲವು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಗುಡ್ಡ ಕುಸಿತ, ಜಿಲ್ಲೆಯ ಜನರಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ವಾಹನ ಸವಾರರು ಆತಂಕದಲ್ಲೇ ಜಿಲ್ಲೆಯ ಘಟ್ಟ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಗುಡ್ಡದಂಚಿನ ನಿವಾಸಿಗಳನ್ನು ಮನೆ ಬಿಟ್ಟು ಹೊಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಕುರಿತ ವರದಿ ಇಲ್ಲಿದೆ.

ಕಾರವಾರ, ಜೂನ್ 14: ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ಪ್ರತಿ ವರ್ಷ ಅತ್ಯಧಿಕ ಮಳೆ (Rain) ಸುರಿಯುತ್ತದೆ. ಆದರೆ, ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ನಿಮಿತ್ತ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಿರಂತರ ಗುಡ್ಡ ಕುಸಿತವಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ಜನರು ಆತಂಕದಲ್ಲೇ ಸಂಚಾರ ಮಾಡುವ ದುಸ್ಥಿತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಅಷ್ಟೆ ಅಲ್ಲದೆ ಗುಡ್ಡದ ಅಂಚಿನಲ್ಲಿ ಮನೆ ಕಟ್ಟಿ ನೆಲೆಸಿರುವ ನೂರಾರು ನಿವಾಸಿಗಳು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದ್ದರು ಸಹಿತ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯುತ್ತಲೇ (Landslide) ಇದೆ. ಬಿದ್ದಿರುವ ಮಣ್ಣನ್ನು ತೆರವು ಮಾಡಲಾಗದೆ ಒಂದು ಬದಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನೇ ನಿರ್ಬಂಧಿಸಲಾಗಿದೆ.
ಕಾರವಾರ ನಗರ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಎರಡು ಟನಲ್ ಪೈಕಿ ಒಂದು ಟನಲ್ ಮೇಲ್ಭಾಗದಲ್ಲಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಟನಲ್ ಬಳಿ ಬ್ಯಾರಿಗೇಟ್ ಹಾಕಿ ವಾಹನ ಸಂಚಾರ ನಿರ್ಬಂಧಿಸಿಲಾಗಿದೆ. ಇನ್ನು. ಕಾರವಾರ ತಾಲೂಕಿನ ಬಿಣಗಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಮಣ್ಣು ಹಾಗೂ ಬಂಡೆ ಕಲ್ಲು ರಸ್ತೆ ಮೇಲೆ ಬಿದ್ದಿದೆ.
ಶಿರಸಿ ತಾಲೂಕಿನ ದೆವಿಮನೆ ಘಟ್ಟಣದಲ್ಲಿ ಶುಕ್ರವಾರ ಸಂಜೆಯಿಂದ ಮೂರು ಕಡೆ ಗುಡ್ಡ ಕುಸಿತ ಆಗಿದ್ದು, ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಸದ್ಯ ಎರಡು ಸೇತುವೆಗಳ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಲಘು ವಾಹನಗಳಿಗಷ್ಟೇ ಅನುವು ಮಾಡಿಕೊಡಲಾಗಿದೆ. ಕಾರವಾರ ನಗರದ ಹುಬುವಾಡದಲ್ಲಿ ಗುಡ್ಡ ಕುಸಿದಿದ್ದು, ಮಣ್ಣು ಹಾಗೂ ಬೃಹತ್ ಮರಗಳು ಧರೆಗುರುಳಿವೆ. ಗುಡ್ಡದಂಚಿನ ಮನೆಯಲ್ಲಿದ್ದವರು ಬೆರೆ ಕಡೆ ಸ್ಥಳಾಂತರ ಆಗುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಕಾರವಾರ ನಗರದ ದೋಬಿಕಟ್ಟಾದಲ್ಲಿನ ಸಾಯಿಮಂದಿರಕ್ಕೆ ಅಂಟಿಕೊಂಡಿರುವ ಗುಡ್ಡ ಕುಸಿದಿದ್ದು, ದೇವಸ್ಥಾನಕ್ಕೆ ಹೊಗಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಆಡಳಿತ ಮಂಡಳಿ ದೇವಸ್ಥಾನದ ಮುಖ್ಯ ದ್ವಾರವನ್ನು ಬಂದ್ ಮಾಡಿದೆ.
ಇದನ್ನೂ ನೋಡಿ: ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆವಲ ಎರಡು ದಿನಗಳ ಕಾಲ ಅಬ್ಬರಿಸಿದ ವರುಣ, ಸದ್ಯ ಸ್ವಲ್ಪ ತಗ್ಗಿದ್ದಾನೆ. ಆದರೆ, ಮಳೆಯಿಂದಾಗುವ ಅವಾಂತರಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಇದರಿಂದ ಜಿಲ್ಲೆಯ ಜನರಿಗೆ ಆತಂಕ ಕಡಿಮೆಯಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







