ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಭಾಷಣ ಮಾಡದೆ ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ ಸದನದಿಂದ ಹೊರ ನಡೆದಿರುವ ಘಟನೆ ನಡೆದಿದೆ. 2025 ರ ತಮಿಳುನಾಡು ವಿಧಾನಸಭೆಯ ಮೊದಲ ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದೆ. ನಿಯಮಗಳ ಪ್ರಕಾರ ರಾಜ್ಯಪಾಲ ಆರ್.ಎನ್.ರವಿ ಅವರ ಭಾಷಣದೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿತ್ತು. ಮಾಧ್ಯಮ ವರದಿಗಳ ಪ್ರಕಾರ, ವಿಧಾನಸಭೆ ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಬದಲು ರಾಜ್ಯ ಗೀತೆಯನ್ನು ಹಾಡಲಾಯಿತು.
ರಾಜ್ಯಗೀತೆ ಹಾಡಿದ ಬಳಿಕ ರಾಷ್ಟ್ರಗೀತೆ ಹಾಡುವಂತೆ ಒತ್ತಡ ಕೇಳಿ ಬಂದಿತ್ತು. ಆದರೆ ಅವರ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬೇಸರಗೊಂಡ ರಾಜ್ಯಪಾಲರು ಭಾಷಣವನ್ನೂ ಮಾಡದೆ ಸದನದಿಂದ ಹೊರ ನಡೆದಿದ್ದಾರೆ.
ಇಡೀ ವಿವಾದದ ಕುರಿತು ತಮಿಳುನಾಡು ರಾಜಭವನ ಹೇಳಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ ರಾಜಭವನ, ‘ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ. ಸಂವಿಧಾನದಲ್ಲಿ ಮೊದಲ ಮೂಲಭೂತ ಕರ್ತವ್ಯವೆಂದರೆ ರಾಷ್ಟ್ರಗೀತೆಗೆ ಗೌರವ ಕೊಡುವುದು ಎಂದು ಹೇಳಲಾಗಿದೆ.
ಎಲ್ಲಾ ರಾಜ್ಯಗಳ ವಿಧಾನಸಭಾ ಅಧಿವೇಶನದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.
ಇಂದು ರಾಜ್ಯಪಾಲರು ಸದನಕ್ಕೆ ಆಗಮಿಸಿದಾಗ ಕೇವಲ ರಾಜ್ಯಗೀತೆ ಮಾತ್ರ ಹಾಡಲಾಯಿತು. ರಾಷ್ಟ್ರಗೀತೆ ಹಾಡುವ ಬಗ್ಗೆ ರಾಜ್ಯಪಾಲರು ಮಾಡಿರುವ ಮನವಿಯನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಸದನದ ಸ್ಪೀಕರ್ ತಿರಸ್ಕರಿಸಿದರು.
ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನದ ಭಾಗವಾಗದೆ ರಾಜ್ಯಪಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸದನದಿಂದ ನಿರ್ಗಮಿಸಿದರು.
ಮತ್ತಷ್ಟು ಓದಿ: Tamil Nadu: ಆರ್ಎನ್ ರವಿ ರಾಜ್ಯಪಾಲ ಹುದ್ದೆಗೆ ಅರ್ಹರಲ್ಲ, ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದ ಎಂಕೆ ಸ್ಟಾಲಿನ್
ಕಳೆದ ಬಾರಿ ರಾಜ್ಯಪಾಲರು ತಮ್ಮ ಭಾಷಣದ ವೇಳೆ ಸರ್ಕಾರದ ನೀಡಿರುವ ಕೆಲವು ಸಾಲುಗಳನ್ನು ಓದಲು ನಿರಾಕರಿಸಿದ್ದರು.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣ ಬಿಸಿಯಾಗಿದ್ದು, ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾರಣ ಈ ವರ್ಷವೂ ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲ ಉಂಟಾಗುವ ನಿರೀಕ್ಷೆ ಇದೆ.
ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರು ಈ ರೀತಿ ಸದನದಿಂದ ನಿರ್ಗಮಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಪಾಲರ ನಿರ್ಗಮನದ ನಂತರ, ಎಐಎಡಿಎಂಕೆ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿತು. ಪ್ರತಿಭಟನಾ ನಿರತ ಶಾಸಕರನ್ನು ಹೊರಹಾಕುವಂತೆ ಸ್ಪೀಕರ್ ಮಾರ್ಷಲ್‌ಗಳಿಗೆ ಆದೇಶಿಸಿದರು.