ಚೆನ್ನೈ: ಕೊವಿಡ್-19 ಪರಿಸ್ಥಿತಿ ಮಧ್ಯೆ ಜಲ್ಲಿಕಟ್ಟು ಜಾನಪದ ಕ್ರೀಡಾಕೂಟ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಕೊರೊನಾ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಸೂಕ್ತ ನಿಬಂಧನೆಗಳನ್ನು ಹೇರಿಕೊಂಡು ಜಲ್ಲಿಕಟ್ಟು ಆಯೋಜಿಸಬೇಕು ಎಂದೂ ಸರ್ಕಾರ ಆದೇಶಿಸಿದೆ.
ಕೊವಿಡ್-19 ನಿಯಮಾವಳಿಯಂತೆ ಜಲ್ಲಿಕಟ್ಟು ನಡೆಯುವ ಸ್ಥಳದಲ್ಲಿ 150 ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ. ಅವರೆಲ್ಲರೂ ಕೊರೊನಾ ನೆಗೆಟಿವ್ ವರದಿ ಪ್ರಮಾಣ ಪತ್ರ ಹೊಂದಿರಬೇಕಿದೆ. ಜಲ್ಲಿಕಟ್ಟು ನೋಡಲು ಬರುವ ಪ್ರೇಕ್ಷಕರಿಗೂ ನಿಬಂಧನೆಗಳನ್ನು ಹೇರಿರುವ ಸರ್ಕಾರ, ಮಾಮೂಲಿಯಂತೆ ಸೇರುತ್ತಿದ್ದ ಒಟ್ಟು ಜನರ ಪೈಕಿ ಅರ್ಧದಷ್ಟು ಮಂದಿ ಮಾತ್ರ ಈ ವರ್ಷ ಇರಬೇಕು ಎಂದು ಸೂಚನೆ ನೀಡಿದೆ.
ಜಲ್ಲಿಕಟ್ಟು ಸ್ಪರ್ಧೆಯನ್ನು ಸುಪ್ರೀಂಕೋರ್ಟ್ 2014ರಲ್ಲಿ ನಿಷೇಧಿಸಿತ್ತು. ಆದರೆ, ತಮಿಳುನಾಡು ರಾಜ್ಯ ಸರ್ಕಾರ, ಜಲ್ಲಿಕಟ್ಟು ಆಟವು ತಮ್ಮ ಸಂಸ್ಕೃತಿಯ ಅಸ್ಮಿತೆ ಎಂದು ಜಲ್ಲಿಕಟ್ಟು ಸ್ಪರ್ಧೆ ನಡೆಸುವುದನ್ನು ಸಮರ್ಥಿಸಿಕೊಂಡಿತ್ತು. ಚೆನ್ನೈ ಸೇರಿದಂತೆ ತಮಿಳುನಾಡು ರಾಜ್ಯದಾದ್ಯಂತ ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ಬಳಿಕ, 2017ರಲ್ಲಿ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಹಿಂಪಡೆಯಲಾಗಿತ್ತು.
ಜಲ್ಲಿಕಟ್ಟು ಜಾನಪದ ಕ್ರೀಡಾಕೂಟವನ್ನು ತಮಿಳುನಾಡಿನಲ್ಲಿ ಪ್ರತಿವರ್ಷ ಪೊಂಗಲ್ ಸಂದರ್ಭ ಆಯೋಜಿಸಲಾಗುತ್ತದೆ. ಈ ಬಾರಿ, ಜನವರಿ 14ರಿಂದ 17ರವರೆಗೆ ಪೊಂಗಲ್ ಆಚರಣೆ ನಡೆಯಲಿದ್ದು ಅದೇ ಸಮಯದಲ್ಲಿ ಜಲ್ಲಿಕಟ್ಟು ಆಟವನ್ನೂ ಆಯೋಜಿಸಲಾಗುತ್ತದೆ. ಪೊಂಗಲ್ಗೆ ಇನ್ನೇನು ಇಪ್ಪತ್ತು ದಿನಗಳು ಉಳಿದಿರುವಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ.
Published On - 4:41 pm, Wed, 23 December 20