
ಚೆನ್ನೈ: ತಮಿಳುನಾಡಿನ ಮುರುಗನ್ ದೇವಾಲಯದಲ್ಲಿ ಪೊಲೀಸರು ತೃತೀಯಲಿಂಗಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು, ಇದರಿಂದ ಇಡೀ ಸಮುದಾಯ ಆಕ್ರೋಶಗೊಂಡಿದೆ. ದೇವಾಲಯದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ನೂಕುನುಗ್ಗಲು ಶುರುವಾಗಿತ್ತು. ಅದನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತೃತೀಯ ಲಿಂಗಿ ಮಹಿಳೆಯ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಪೊಲೀಸರ ಸುತ್ತಲೂ ತೃತೀಯಲಿಂಗಿ ಸಮುದಾಯದ ಜನರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು.
ತಮಿಳುನಾಡಿನ ತಿರುವಳ್ಳೂರಿನ ಮುರುಗನ್ ದೇವಾಲಯದ ಹೊರಗೆ ಜನಸಂದಣಿಯನ್ನು ನಿರ್ವಹಿಸುವಾಗ ಡಿಎಸ್‌ಪಿ ತೃತೀಯಲಿಂಗಿ ಮಹಿಳೆಗೆ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ತೃತೀಯಲಿಂಗಿ ಸಮುದಾಯದಿಂದ ಪ್ರತಿಭಟನೆಗೆ ಕಾರಣವಾಯಿತು.
ಮುರುಗನ್ ದೇವರಿಗೆ ಅರ್ಪಿತವಾದ ಥೈ ಪೂಸಂ ಆಚರಣೆಯ ಸಂದರ್ಭದಲ್ಲಿ ಸಿರುವಾಪುರಿ ಮುರುಗನ್ ದೇವಾಲಯದಲ್ಲಿ ಈ ಘಟನೆ ಸಂಭವಿಸಿದೆ. ಶುಭ ಸಂದರ್ಭದಲ್ಲಿ ದರ್ಶನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಜನಸಂದಣಿಯನ್ನು ನಿರ್ವಹಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ತಮಿಳುನಾಡು: ಗರ್ಭಿಣಿಗೆ ಲೈಂಗಿಕ ಕಿರುಕುಳ, ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ದುರುಳರು
ಸಾಮಾನ್ಯ ಭಕ್ತರು ದೀರ್ಘ ಸರತಿ ಸಾಲಿನಲ್ಲಿ ಕಾಯುತ್ತಿರುವಾಗ, ವಿಐಪಿಗಳಿಗೆ ದೇವಾಲಯದ ನಿರ್ಗಮನದ ಮೂಲಕ ವಿಶೇಷ ಪ್ರವೇಶ ನೀಡಲಾಗುತ್ತಿದೆ ಎಂದು ಆರೋಪಿಸಿ ತೃತೀಯಲಿಂಗಿಗಳ ಗುಂಪೊಂದು ಪ್ರತಿಭಟಿಸಿದಾಗ ಉದ್ವಿಗ್ನತೆ ಉಂಟಾಯಿತು. ಆಗ ಜನಸಂದಣಿ ನಿಯಂತ್ರಣವನ್ನು ನೋಡಿಕೊಳ್ಳುತ್ತಿದ್ದ ಉತ್ತುಕೊಟ್ಟೈ ಡಿಎಸ್‌ಪಿ ಕೆ. ಶಾಂತಿ ಮಧ್ಯಪ್ರವೇಶಿಸಿದರು. ಈ ವೇಳೆ ಆಕೆ ತೃತೀಯಲಿಂಗಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಎಸ್‌ಪಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಪ್ರತಿಭಟನೆ ಆರಂಭಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Tue, 11 February 25