ಚೆನ್ನೈ: ಚೆನ್ನೈ ಸೇರಿ ತಮಿಳುನಾಡಿನ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇಂದು ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದ ಮನೆ ಕುಸಿದ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಒಂಬತ್ತು ಜನರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯ ಗೋಡೆ ಕುಸಿದು ಮನೆಯಲ್ಲಿ ವಾಸವಾಗಿದ್ದ ನಾಲ್ವರು ಮಹಿಳೆಯರು, ನಾಲ್ಕು ಮಕ್ಕಳು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ ಇಡೀ ಕುಟುಂಬಸ್ಥರು ಮಲಗಿದ್ದಾಗ ಈ ದುರಂತ ನಡೆದಿದೆ. ಮನೆಯವರು ಗಾಢ ನಿದ್ದೆಯಲ್ಲಿದ್ದಾಗ ಮನೆ ಕುಸಿದಿದ್ದು, ಮೃತರನ್ನು ಅನೀಶಾ ಬೇಗಂ (63), ಕೌಸರ್ (45), ರೋಗಿ ನಾಸ್ (27), ತನ್ಸಿಲಾ (27), ಮಿಸ್ಬಾ ಫಾತಿಮಾ (22), ಮನುಲ್ಲಾ (8), ಅಫ್ರಾ (4), ಅಬಿರಾ (3) ಮತ್ತು ದಾಮೋದ್ (2) ಎಂದು ಗುರುತಿಸಲಾಗಿದೆ. ಮನೆ ಗೋಡೆ ಕುಸಿಯುತ್ತಿದ್ದಂತೆ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೆರ್ನಂಪಟ್ಟು ಸಮೀಪದ ಎರಿಕುತಿ ಎಂಬಲ್ಲಿನ ಅರಣ್ಯದಂಚಿನ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದೆ. ಕುಸಿದು ಬಿದ್ದ ಮನೆಯಲ್ಲಿ ಒಂದೇ ಕುಟುಂಬದ 13 ಮಂದಿ ವಾಸವಿದ್ದರು. ಉಳಿದಿರುವ ನಾಲ್ವರು ಸದಸ್ಯರನ್ನು ಹಾಗೂ ಅಕ್ಕಪಕ್ಕದ ಮನೆಯ ಇತರ ನಾಲ್ವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಅವರೆಲ್ಲರೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಲ್ಲೂರಿನಲ್ಲಿ ಮಳೆ ಪ್ರವಾಹದಿಂದ ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಕಂದಾಯ ಇಲಾಖೆ ಎಚ್ಚರಿಕೆ ನೀಡಿದ್ದು, ಹತ್ತಿರದ ಕ್ಯಾಂಪ್‌ಗೆ ಸ್ಥಳಾಂತರಿಸಲು ಸೂಚಿಸಿದೆ.
Tamil Nadu | Nine people died in sleep after their house collpased due to incessant rainfall in Pernambut, Vellore this morning. Deceased include 4 women, 4 children and a man. Injured have been rescued: Collector TP Kumaravel Pandian pic.twitter.com/Sd2uPUSTSK
— ANI (@ANI) November 19, 2021
ವೆಲ್ಲೂರಿನಲ್ಲಿ 9 ಜನರ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಭಾರೀ ಮಳೆಯಿಂದಾಗಿ ವೆಲ್ಲೂರು ಜಿಲ್ಲೆಯ ಮಸೀದಿ ಸ್ಟ್ರೀಟ್‌ನಲ್ಲಿರುವ ಮನೆಯೊಂದರ ಅವಶೇಷಗಳಲ್ಲಿ ನಾಲ್ಕು ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ನನಗೆ ದುಃಖವಾಯಿತು ಎಂದು ಅವರು ಹೇಳಿದ್ದಾರೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸ್ಟಾಲಿನ್ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ.
ಇಂದು ಕೂಡ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ದಿಂಡುಗಲ್, ಪುದುಕೊಟ್ಟೈ, ತೇಣಿ, ವೆಲ್ಲೂರು, ಅರಿಯಲ್ಲೂರು, ನಾಗಪಟ್ಟಣಂ, ವಿಲ್ಲುಪುರ, ತಿರುವಾರೂರ್, ಮೈಲಾಡುಧುರೈ, ಕಲ್ಲಕುರಿಚಿ, ಕಡಲೂರು, ವಿಲ್ಲಿಪುರಂ, ತಂಜಾವೂರು ಮತ್ತು ಧರ್ಮಪುರಿಯಲ್ಲಿ ಶಾಲಾ- ಕಾಲೇಜುಗಳು ಮುಚ್ಚಲಿವೆ. ಇಂದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿದೆ. ಭಾರತೀಯ ಹವಾಮಾನ ಇಲಾಖೆಯು ಚೆನ್ನೈ ಮತ್ತು ಇತರ 15 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ. ಚೆನ್ನೈ ಜಿಲ್ಲಾಧಿಕಾರಿಗಳು ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.
ಇದನ್ನೂ ಓದಿ: Tamil Nadu Rain: ತಮಿಳುನಾಡಿನಲ್ಲಿ ಮಳೆಯಿಂದ 16 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಶಾಲೆ, ಕಾಲೇಜು ಬಂದ್
Tamil Nadu rains ತಮಿಳುನಾಡಿನಾದ್ಯಂತ ಮುಂದುವರಿದ ಮಳೆ: ಚೆನ್ನೈ ಮತ್ತು ನೆರೆಯ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
Published On - 4:55 pm, Fri, 19 November 21