ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ಬರಹಗಾರ ನೆಲ್ಲಾಯಿ ಕಣ್ಣನ್ ಅವರನ್ನ ಅರೆಸ್ಟ್ ಮಾಡಲಾಗಿದೆ. ಅವರನ್ನ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅರೆಸ್ಟ್ ಮಾಡಲಾಗಿದೆ.
‘ಸಿಎಎಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’
ಸಂಸತ್ತು ಅಂಗೀಕರಿಸಿದ ಕಾನೂನು ಜಾರಿಗೆ ತರುವುದು ರಾಜ್ಯಗಳ ಕರ್ತವ್ಯ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಅಲ್ಲದೆ ಸಿಎಎ ವಿರುದ್ಧ ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
‘ಅಖಿಲೇಶ್ ಪಾಕ್ನಲ್ಲಿ ಇದ್ದು ಬರಲಿ’
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಒಂದು ತಿಂಗಳು ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿನ ಹಿಂದೂಗಳು ಅನುಭವಿಸುತ್ತಿರುವ ದೌರ್ಜನ್ಯ ಅರ್ಥಮಾಡಿಕೊಳ್ಳಲಿ ಅಂತ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸವಾಲೆಸೆದಿದ್ದಾರೆ. ಎನ್ಆರ್‌ಸಿ, ಎನ್‌ಪಿಆರ್ ವಿರುದ್ಧ ಅಖಿಲೇಶ್ ಹೇಳಿಕೆ ನೀಡಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾಲ್ವರು ಗಗನಯಾತ್ರಿಗಳು ಫೈನಲ್:
ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್ಗೆ ನಾಲ್ವರು ಗಗನಯಾತ್ರಿಗಳನ್ನ ಅಂತಿಮ ಗೊಳಿಸಿರೋದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ಆಯ್ಕೆಯಾದವರೆಲ್ಲರೂ ವಾಯುಸೇನೆಯವರೇ ಆಗಿದ್ದು, ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ಆರಂಭವಾಗಲಿದೆ.
1ತಿಂಗಳು.. 100 ಶಿಶುಗಳು ಸಾವು..!
ರಾಜಸ್ಥಾನದ ಕೋಟಾ ಜಿಲ್ಲೆಯ ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆಗೆ ಹೋಗಲು ರೋಗಿಗಳು ಭೂಯಬೀಳುತ್ತಿದ್ದಾರೆ. ಯಾಕಂದ್ರೆ ಕಳೆದ 1 ತಿಂಗಳಲ್ಲಿ ತಾಯಿಯ ಮಡಿಲು ಸೇರುವ ಮೊದಲೇ 100ಕ್ಕೂ ಹೆಚ್ಚು ಹಸುಗೂಸುಗಳ ಪ್ರಾಣ ಬಿಟ್ಟಿವೆ. ವೈದ್ಯರ ನಿರ್ಲಕ್ಷ್ಯ, ಮೂಲ ಸೌಕರ್ಯ ಇಲ್ಲದೇ ಇರೋದೇ ದುರಂತಕ್ಕೆ ಕಾರಣ ಎನ್ನಲಾಗ್ತಿದೆ.
21ರೈಲುಗಳ ಸಂಚಾರ ಅಸ್ತವ್ಯಸ್ತ:
ಮೈಕೊರೆಯುವ ಚಳಿ ದಟ್ಟ ಮಂಜು ದೆಹಲಿಯನ್ನ ಬಿಟ್ಟೂ ಬಿಡದೇ ಕಾಡುತ್ತಿದೆ. ದಟ್ಟ ಮಂಜಿನಿಂದಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ಸುಮಾರು 21ರೈಲುಗಳು ತಡವಾಗಿ ಸಂಚಾರ ಆರಂಭಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು.
ಡಿಆರ್ಐ ಹೆಚ್ಚುವರಿ ಪ್ರಧಾನ ನಿರ್ದೇಶಕ ಅರೆಸ್ಟ್:
ಕಂದಾಯ ಗುಪ್ತಚರ ನಿರ್ದೇಶನಾಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ ಚಂದ್ರಶೇಖರ್ರನ್ನು ಸಿಬಿಐ ಬಂಧಿಸಿದೆ. 25 ಲಕ್ಷ ರೂ. ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದ್ದು, ನವದೆಹಲಿ, ನೋಯ್ಡಾ, ಲೂಧಿಯಾನದಲ್ಲಿ ಸಿಬಿಐ ಶೋಧ ನಡೆಸಿದೆ. ಲೂಧಿಯಾನದ ಕಚೇರಿಯಲ್ಲಿ ಚಂದ್ರಶೇಖರ್ ಎಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.