ದೆಹಲಿ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಕೆಲ ಭದ್ರತಾ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ನಿರ್ಬಂಧಗಳನ್ನು ಇನ್ನೂ ಸಂಪೂರ್ಣವಾಗಿ ತೆರವುಗೊಂಡಿಲ್ಲ. ಈಗಲೂ ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬ್ ಮುಫ್ತಿ ಗೃಹ ಬಂಧನದಲ್ಲೇ ಇದ್ದಾರೆ. ಭಾರತದ ಸಂಸತ್ತಿನ ಸದಸ್ಯರು ಕಾಶ್ಮೀರಕ್ಕೆ ಭೇಟಿ ನೀಡಲು ಕೂಡ ಕೇಂದ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿ ಗ್ರೌಂಡ್ ರಿಯಾಲಿಟಿ ಚೆಕ್ ಮಾಡಲು ದೆಹಲಿಯ ಯೂರೋಪಿಯನ್ ರಾಷ್ಟ್ರಗಳು ಹಾಗೂ ಗಲ್ಪ್ ರಾಷ್ಟ್ರಗಳ ರಾಯಭಾರಿಗಳಿಗೆ ಆಹ್ವಾನ ನೀಡಿದೆ.
ಇಂದು, ನಾಳೆ ಕಾಶ್ಮೀರಕ್ಕೆ 18 ರಾಯಭಾರಿಗಳ ಭೇಟಿ!
ಅಂದಹಾಗೆ ಗುರುವಾರ ಮತ್ತು ಶುಕ್ರವಾರ ಅಂದ್ರೆ ಇಂದು ಹಾಗು ನಾಳೆ 18 ರಾಯಭಾರಿಗಳು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಕೆಲ ರಾಯಭಾರಿಗಳು ತಾವು ಮುಕ್ತವಾಗಿ ಜಮ್ಮು ಕಾಶ್ಮೀರದಲ್ಲಿ ಓಡಾಡಿ ಜನರೊಂದಿಗೆ ಮಾತನಾಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕಾಶ್ಮೀರದ ಸ್ಥಳೀಯ ಜನ, ನಾಯಕರು, ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಬಹುದು ಎಂದು ಹೇಳಿದೆ. ಪೋನ್ ಸಂಪರ್ಕಕ್ಕೆ ವಿಧಿಸಲಾಗಿದ್ದ ನಿರ್ಬಂಧ ಸ್ಪಲ್ಪ ಮಟ್ಟಿಗೆ ತೆರವಾಗಿದೆ. ಆದರೆ ನಿರ್ಬಂಧ ಸಂಪೂರ್ಣವಾಗಿ ರದ್ದುಪಡಿಸಿಲ್ಲ. 6 ಸಾವಿರ ಹೆಚ್ಚುವರಿ ಭದ್ರತಾ ಪಡೆಗಳನ್ನ ವಾಪಸ್ ಕರೆಸಿಕೊಳ್ಳಲಾಗಿದೆ.
ಅಂದಹಾಗೆ ಇದೇ ರೀತಿ ಕಳೆದ ಆಕ್ಟೋಬರ್ನಲ್ಲೂ ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಸದಸ್ಯರಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಕೊಡಲಾಗಿತ್ತು. ಆಗಲೂ ವಿಪಕ್ಷಗಳು ಗರಂ ಆಗಿದ್ದವು. ವಿದೇಶಿ ಪಾರ್ಲಿಮೆಂಟ್ ಸದಸ್ಯರ ಭೇಟಿಗೆ ಅವಕಾಶ ಕೊಟ್ಟು ಭಾರತದ ಸಂಸದರ ಭೇಟಿಗೆ ಅವಕಾಶ ಕೊಡದೇ ಇರೋ ಕ್ರಮವನ್ನು ತೀವ್ರವಾಗಿ ಟೀಕಿಸಲಾಗಿತ್ತು.
ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಕಾಶ್ಮೀರಕ್ಕೆ ಹೋದಾಗ ಏರ್ಪೋರ್ಟ್ನಿಂದಲೇ ದೆಹಲಿಗೆ ವಾಪಸ್ ಕಳಿಸಲಾಗಿತ್ತು. ಇದನ್ನು ಸಂಸತ್ ನಲ್ಲೂ ಪ್ರಶ್ನಿಸಲಾಗಿತ್ತು. ಈಗ ಮತ್ತೆ ಕೇಂದ್ರ ಸರ್ಕಾರವು ವಿದೇಶಿ ರಾಯಭಾರಿಗಳಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಕೊಡುವ ಮೂಲಕ ಯೂರೋಪಿಯನ್ ಯೂನಿಯನ್, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಶ್ಮೀರದ ಬಗ್ಗೆ ಇರೋ ಅಭಿಪ್ರಾಯ ಬದಲಿಸಲು ಮುಂದಾಗಿದೆ. ಈ ಭೇಟಿಯಿಂದ ನಿಜಕ್ಕೂ ವಿದೇಶಿ ರಾಯಭಾರಿಗಳಿಗೆ ಕಾಶ್ಮೀರದ ಈಗಿನ ಸ್ಥಿತಿ ಬಗ್ಗೆ ಯಾವ ಅಭಿಪ್ರಾಯ ಬರಲಿದೆ ಅನ್ನೋದು ಇನ್ನೂ ಒಂದೆರೆಡು ದಿನಗಳಲ್ಲಿ ಗೊತ್ತಾಗಲಿದೆ.