ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(K Chandrasekhar Rao) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೆಸಿಆರ್ ಅವರ ಸೊಂಟದ ಮೂಳೆ ಮುರಿದಿದೆ ಎನ್ನುವ ಸುದ್ದಿ ಲಭ್ಯವಾಗಿದೆ. ಸದ್ಯ ಸೋಮಾಜಿಗುಡಾದ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಸಿಆರ್ ಅನಾರೋಗ್ಯದ ವಿಷಯ ತಿಳಿದ ತಕ್ಷಣ ಕುಟುಂಬಸ್ಥರೆಲ್ಲಾ ಆಸ್ಪತ್ರೆಗೆ ಧಾವಿಸಿದರು.
ಹರೀಶ್ ರಾವ್ ಜತೆಗೆ ಕೆಟಿಆರ್ ಕುಟುಂಬ ರಾತ್ರಿ ಯಶೋಧಾ ಬಳಿ ತೆರಳಿದ್ದರು. ಬೆಳಗಿನ ಜಾವದವರೆಗೂ ಅಲ್ಲೇ ಇದ್ದರು, ವೈದ್ಯರೊಂದಿಗೆ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಮಾಡಬೇಕಾದ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಯಶೋಧಾ ಆಸ್ಪತ್ರೆಯ 9ನೇ ಮಹಡಿಯಲ್ಲಿ ಕೆಸಿಆರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವೈದ್ಯರು ಪರೀಕ್ಷೆ ಮಾಡಿ ಹೆಲ್ತ್ ಬುಲೆಟಿನ್ ನೀಡಿದ್ದಾರೆ. ಸದ್ಯ ಕೆಸಿಆರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೆಸಿಆರ್ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕೆಸಿಆರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬೇಸರವಾಯಿತು ಎಂದರು. ಕೆಸಿಆರ್ ಅವರ ಆರೋಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು. ಕೆಸಿಆರ್ ಗಾಯದಿಂದ ಚೇತರಿಸಿಕೊಳ್ಳಲಿ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ಓದಿ: ತೆಲಂಗಾಣ: ಮಗನ ಮಾತು ಕೇಳದೆ ಚುನಾವಣೆಯಲ್ಲಿ ಸೋಲು ತಂದುಕೊಂಡ್ರಾ ಕೆಸಿಆರ್
ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭಾ ಚುನಾವಣೆ ನಡೆದಿತ್ತು, ಡಿಸೆಂಬರ್ 3 ರಂದು ಫಲಿತಾಂಶ ಹೊರಬಿದ್ದಿತ್ತು. ಕಾಂಗ್ರೆಸ್ ಎದುರು ಬಿಆರ್ಎಸ್ ಹೀನಾಯವಾಗಿ ಸೋತಿತ್ತು. ಕಾಂಗ್ರೆಸ್ನಿಂದ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ತೆಲಂಗಾಣ ಬೇರೆ ರಾಜ್ಯವಾದಗಿನಿಂದ ಚಂದ್ರಶೇಖರ್ ರಾವ್ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು, ಈ ಬಾರಿ ಹ್ಯಾಟ್ರಿಕ್ ಕನಸು ಕೈತಪ್ಪಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:26 am, Fri, 8 December 23