ಬಲಿಕೊಡಲು ಹಸುಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಗುಂಪೊಂದು ಮದರಸಾ(Madrasa) ಮೇಲೆ ದಾಳಿ ನಡೆಸಿರುವ ಘಟನೆ ತೆಲಂಗಾಣದ ಮೇದಕ್ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ, ಮಿರಾಜ್ ಉಲ್ ಉಲೂಮ್ ಮದರಸಾದ ಆಡಳಿತ ಮಂಡಳಿಯು ಬಕ್ರೀದ್ ನಿಮಿತ್ತ ಹಸುಗಳನ್ನು ಬಲಿಗಾಗಿ ಖರೀದಿಸಿತ್ತು. ಅವರು ದನಗಳನ್ನು ಕರೆತಂದ ಕೂಡಲೇ ಮದರಸಾದ ಸುತ್ತಲೂ ಗುಂಪು ಜಮಾಯಿಸಿ ಬಲಿಯನ್ನು ವಿರೋಧಿಸಿತ್ತು, ಆದರೆ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದರಿಸಿದರು.
ಆರ್ಎಸ್ಎಸ್ನ ಸಾವಿರಾರು ಮಂದಿ ಹಾಗೂ ಹಿಂದೂಪರ ಸಂಘಟನೆಗಳು ಮದರಸಾ ಮೇಲೆ ದಾಳಿ ಮಾಡಿ ಆಡಳಿತ ಮಂಡಳಿಯ ಸದಸ್ಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಎಐಎಂಐಎಂ ಶಾಸಕ ಎಂ ಕೌಸರ್ ಮೊಹಿಯುದ್ದೀನ್ ಆರೋಪಿಸಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ, ಗುಂಪು ಆಸ್ಪತ್ರೆಯನ್ನು ಧ್ವಂಸ ಮಾಡಿದೆ ಎಂದು ಅವರು ಹೇಳಿದರು. ಮೇಡಕ್ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಕೌಸರ್ ಹೇಳಿದ್ದಾರೆ.
ಮತ್ತಷ್ಟು ಓದಿ: ಈ ಪ್ರದೇಶದಲ್ಲಿ ನಮಾಜ್ ಮಾಡುವಂತಿಲ್ಲ, ಬಕ್ರೀದ್ಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ ಸರ್ಕಾರ
ಹನುಮ ಜಯಂತಿ ವೇಳೆ ಇದೇ ರೀತಿಯ ಘಟನೆ ನಡೆದಿದ್ದು, ಹಲವು ಮುಸ್ಲಿಮರ ಮೇಲೆ ದಾಳಿ ನಡೆಸಿ ಅವರ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಶಾಸಕ ಕೌಸರ್ ತಿಳಿಸಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ಮತ್ತು ಹಿಂದೂ ವಾಹಿನಿ ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಮತ್ತು ಶಾಂತಿ ಕದಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ