ಆಪರೇಷನ್ ಕಮಲ ಆರೋಪ: ಶಾಸಕ-ಸ್ವಾಮೀಜಿ ಆಡಿಯೋ ಲೀಕ್, ಬಿಎಲ್ ಸಂತೋಷ್ ಹೆಸರು ಪ್ರಸ್ತಾಪ

| Updated By: ರಮೇಶ್ ಬಿ. ಜವಳಗೇರಾ

Updated on: Oct 28, 2022 | 4:26 PM

ತೆಲಂಗಾಣದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಲಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಪರೇಷನ ಕಮಲ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಸ್ವಾಮೀಜಿಯೊಬ್ಬರು ಶಾಸಕರೊಬ್ಬರಿಗೆ ಆಮಿಷ ಒಡ್ಡಿರುವ ಆಡಿಯೋ ಲೀಕ್ ಆಗಿದೆ.

ಆಪರೇಷನ್ ಕಮಲ ಆರೋಪ: ಶಾಸಕ-ಸ್ವಾಮೀಜಿ ಆಡಿಯೋ ಲೀಕ್, ಬಿಎಲ್ ಸಂತೋಷ್ ಹೆಸರು ಪ್ರಸ್ತಾಪ
BL Santosh
Follow us on

ಹೈದರಾಬಾದ್‌: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಿರುವ ಆರೋಪಗಳು ಕೇಳಿಬಂದಿವೆ. ಶಾಸಕರನ್ನು ಖರೀದಿಸಲು ಬಂದಿದ್ದ ಎನ್ನಲಾದ ಮೂವರನ್ನು 15 ಕೋಟಿ ರೂ. ಹಣದ ಜೊತೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದ್ರೆ, ಆಪರೇಷನ್ ಕಮಲ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಇದರ ಮಧ್ಯೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪವಾಗಿರುವುದು ಸಂಚಲನ ಮೂಡಿಸಿದೆ.

ಶಾಸಕ ರೋಹಿತ್ ರೆಡ್ಡಿ ಹಾಗೂ ರಾಮಚಂದ್ರ ಭಾರತಿ ಸ್ವಾಮಿಜಿ ನಡುವಿನ ಸಂಭಾಷಣೆ ಆಡಿಯೋ ಇದಾಗಿದ್ದು, ಬಿ.ಎಲ್‌ ಸಂತೋಷ್‌ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ನೀವು ಬಿಜೆಪಿ ಸೇರಿ. ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ಸಂತೋಷ್ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಟಿಆರ್ ಎಸ್ ಶಾಸಕನಿಗೆ ಆಮಿಷ ಒಡ್ಡಿದ್ದಾರೆ.

ತೆಲಂಗಾಣದ ಫಾರ್ಮ್ ಹೌಸ್ ಮೇಲೆ ಪೊಲೀಸ್ ದಾಳಿ: ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್

ಅವರು ಇಡಿ ಮತ್ತು ಸಿಬಿಐ ದಾಳಿಗಳು ಆಗದಂತೆ ನೋಡಿಕೊಳ್ಳುತ್ತಾರೆ. ಇನ್ನಿಬ್ಬರು ಶಾಸಕರು ಬಿಜೆಪಿ ಸೇರಲಿದ್ದಾರೆ. ನವೆಂಬರ್ 2ರಂದು ಹೈದ್ರಾಬಾದ್ ಗೆ ಬರುತ್ತೇನೆ. ಅವರ ಹೆಸರನ್ನು ಅಂದು ಬಹಿರಂಗಪಡಿಸುತ್ತೇನೆ. ಗ್ರಹಣದ‌ ನಂತರ ಭೇಟಿಯಾಗೋಣ ಎಂದು ಸ್ವಾಮೀಜಿ ಸಂಭಾಷಣೆ ವೇಳೆ ಶಾಸಕ ರೋಹಿತ್ ರೆಡ್ಡಿ ಹೇಳಿದ್ದು, ಇದೀಗ ಆ ಆಡಿಯೋ ಲೀಕ್ ಆಗಿದೆ. ಇದರಿಂದ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಫಾರ್ಮ್​ ಹೌಸ್​ ಮೇಲೆ ಪೊಲೀಸ್ ದಾಳಿ

ಅಕ್ಟೋಬರ್ 26ರಂದುತೆಲಂಗಾಣದ ಸೈಬರಾಬಾದ್ ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಈ ಹಣ ತರಲಾಗಿತ್ತು ಎನ್ನಲಾಗಿತ್ತು.

ಟಿಆರ್‌ಎಸ್‌ನ ನಾಲ್ವರು ಪ್ರಮುಖ ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿರೋದಾಗಿ ತೆಲಂಗಾಣ ಪೊಲೀಸರು ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟಿಆರ್‌ಎಸ್ ಕೂಡಾ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಪಕ್ಷಾಂತರ ಮಾಡಲು ಬಿಜೆಪಿ 100 ಕೋಟಿ ರೂ. ಆಫರ್ ಕೊಟ್ಟಿತ್ತು ಎಂದು ಆರೋಪಿಸಿತ್ತು. ಆದರೆ ತೆಲಂಗಾಣ ಬಿಜೆಪಿ ಈ ಎಲ್ಲಾ ಆರೋಪಗಳನ್ನೂ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಆಪರೇಷನ್‌ ಕಮಲದ ಆರೋಪವೇ ಸುಳ್ಳೆಂದು ಬಿಜೆಪಿ ಹೇಳಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡಿರುವ ನಾಟಕವನ್ನು ಕೆಆರ್‌ಎಸ್‌ ಪ್ರದರ್ಶನ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.

Published On - 4:19 pm, Fri, 28 October 22