ಪಂಜಾಬ್​ನಲ್ಲಿ ಭದ್ರತಾ ಲೋಪದಿಂದ ಸಿಟ್ಟಾದ ಪ್ರಧಾನಿ ಮೋದಿ; ನಾನು ಜೀವಂತವಾಗಿಯಾದರೂ ಬಂದೆನಲ್ಲ ಎಂದ ಪ್ರಧಾನಮಂತ್ರಿ

| Updated By: Lakshmi Hegde

Updated on: Jan 05, 2022 | 5:41 PM

ಮಾರ್ಗ ಮಧ್ಯೆ ರಸ್ತೆಯನ್ನು ಕೆಲವು ಪ್ರತಿಭಟನಾಕಾರರು ತಡೆದ ಕಾರಣ, ಪ್ರಧಾನಿ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳೆಲ್ಲ  ಫ್ಲೈಓವರ್ ಮೇಲೆ 15-20ನಿಮಿಷ ನಿಲ್ಲುವಂತಾಯ್ತು.

ಪಂಜಾಬ್​ನಲ್ಲಿ ಭದ್ರತಾ ಲೋಪದಿಂದ ಸಿಟ್ಟಾದ ಪ್ರಧಾನಿ ಮೋದಿ; ನಾನು ಜೀವಂತವಾಗಿಯಾದರೂ ಬಂದೆನಲ್ಲ ಎಂದ ಪ್ರಧಾನಮಂತ್ರಿ
ಪ್ರಧಾನಿ ಮೋದಿ
Follow us on

ಪಂಜಾಬ್​ನ ಫಿರೋಜ್​ಪುರದಲ್ಲಿ ಆಯೋಜಿಸಲ್ಪಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರ ರ್ಯಾಲಿ ಕೊನೇ ಕ್ಷಣದಲ್ಲಿ ರದ್ದಾಗಿದೆ. ಅದಕ್ಕೆ ಕಾರಣ ಭದ್ರತೆಯಲ್ಲಿ ಉಂಟಾದ ಲೋಪ. ಭಟಿಂಡಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿ ಫಿರೋಜ್​ಪುರಕ್ಕೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಆ ರಸ್ತೆಯನ್ನು ಕೆಲವು ಪ್ರತಿಭಟನಾಕಾರರು ತಡೆದ ಕಾರಣ, ಪ್ರಧಾನಿ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳೆಲ್ಲ  ಫ್ಲೈಓವರ್ ಮೇಲೆ 15-20ನಿಮಿಷ ನಿಲ್ಲುವಂತಾಯ್ತು. ಬಳಿಕ ಫಿರೋಜ್​ಪುರ ರ್ಯಾಲಿಯನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ವಾಪಸ್​ ಬಂದಿದ್ದಾರೆ. ಹೀಗೆ, ವಾಪಸ್ ಬರುವುದಕ್ಕೂ ಮೊದಲು ಅಲ್ಲಿದ್ದ ರಾಜ್ಯ ಸರ್ಕಾರದ ಭದ್ರತಾ ಸಿಬ್ಬಂದಿ ಬಳಿ ಕೊನೆಯದಾಗಿ ಒಂದು ಮಾತು ಹೇಳಿದ್ದಾರೆ. 

ದೆಹಲಿಗೆ ವಾಪಸ್​ ಆಗಲು ಭಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಪ್ರಧಾನಿ ಮೋದಿ, ಕೋಪಗೊಂಡಿದ್ದು ಕಾಣುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಹಾಗೇ, ಅಲ್ಲಿ ಭದ್ರತೆ ಒದಗಿಸುವ ಸಲುವಾಗಿ ಇದ್ದ ಪಂಜಾಬ್​ ರಾಜ್ಯ ರಕ್ಷಣಾ ಅಧಿಕಾರಿಗಳಿಗೆ, ‘ನಿಮ್ಮ ಮುಖ್ಯಮಂತ್ರಿಗೆ ನನ್ನ ಧನ್ಯವಾದ ತಿಳಿಸಿ, ಕೊನೆಪಕ್ಷ ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೆ ಜೀವಂತವಾಗಿಯಾದರೂ ಬರುವಂತೆ ಮಾಡಿದರು’ ಎಂದು ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಪಂಜಾಬ್​ನಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಇಂದು ಸುಮಾರು 42,750 ಕೋಟಿ ರೂ.ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಇತ್ತು. ಆದರೆ ಪ್ರಧಾನಿ ಮೋದಿ ಹೊರಟಿದ್ದ ರಸ್ತೆ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಅವರು ವಾಪಸ್ ಬರುವಂತಾಯಿತು. ಇತ್ತೀಚಿಗಿನ ದಿನಗಳಲ್ಲಿ ಹೀಗಿ ಪ್ರಧಾನಿಯೊಬ್ಬರ ಭದ್ರತೆಯಲ್ಲಿ ಲೋಪ ಆಗಿರಲಿಲ್ಲ. ಅದರಲ್ಲೂ ಭಾರತದಲ್ಲಿ ಮೋದಿಯವರು ಪ್ರಧಾನಿಯಾದ ಮೇಲೆ ಭದ್ರತೆಯ ಲೋಪದ ಕಾರಣಕ್ಕೆ ಅವರು ಹಿಡಿದ ಕೆಲಸ ಬಿಟ್ಟ ಉದಾಹರಣೆ ಇರಲಿಲ್ಲ. ಆದರೆ ಇಂದಿನ ಈ ಬೆಳವಣಿಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್​ ಬೇಕೆಂದೆಲೇ ಹೀಗೆ ಮಾಡುತ್ತಿದೆ ಎಂಬ ಆರೋಪ ಬಿಜೆಪಿ ಮತ್ತು ಅದರ ಬೆಂಬಲಿಗರ ಕಡೆಯಿಂದ ಬರುತ್ತಿದೆ.

ಇನ್ನು ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪಂಜಾಬ್​ ಸರ್ಕಾರದಿಂದ ವರದಿಯನ್ನೂ ಕೇಳಿದೆ. ಈ ಲೋಪದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆದೇಶ ನೀಡಿದೆ. ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ, ಇಂದು ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಭಟಿಂಡಾ ವಿಮಾನ ನಿಲ್ದಾಣದಲ್ಲಿ ಇಳಿದರು. ಅವರು ಅಲ್ಲಿಂದ ಮೊದಲು ಹುಸ್ಸೇನಿವಾಲಾ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಹೆಲಿಕಾಪ್ಟರ್ ಮೂಲಕ ಭೇಟಿ ಕೊಡಬೇಕಿತ್ತು. ಆದರೆ ಮಳೆ ಮತ್ತು ಅಸ್ಪಷ್ಟ ಗೋಚರತೆಯ ಕಾರಣಕ್ಕೆ ವಿಳಂಬವಾಯಿತು. ಸುಮಾರು 20 ನಿಮಿಷ ಪ್ರಧಾನಮಂತ್ರಿ ಅಲ್ಲಿ ಕೂಡ ಕಾದರು. ಎಷ್ಟೇ ಹೊತ್ತಾದರೂ ಹವಾಮಾನ ಸರಿಯಾಗದ ಕಾರಣ ರಸ್ತೆ ಮಾರ್ಗದ ಮೂಲಕ ಹೊರಡಲಾಯಿತು. ರಸ್ತೆ ಮಾರ್ಗದಲ್ಲಿ ಹೋಗಲು ಏನಿಲ್ಲವೆಂದರೂ 2 ತಾಸು ಬೇಕು. ಹಾಗಿದ್ದಾಗ್ಯೂ ಕೂಡ ಹೊರಟರು. ಪಿಎಂ ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡಲು ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಪಂಜಾಬ್​ ಡಿಜಿಪಿ ದೃಢಪಡಿಸಿದ ನಂತರವೇ ವಿಮಾನ ನಿಲ್ದಾಣದಿಂದ ಹೊರಟಿದ್ದು. ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಇನ್ನೂ 30 ಕಿಮೀ ದೂರ ಇದೆ ಎನ್ನುವಾಗ ಒಂದು ಫ್ಲೈಓವರ್ ಸಿಗುತ್ತದೆ. ಆ ಫ್ಲೈಓವರ್​ ಬಳಿ ರೈತರು ಪ್ರತಿಭಟನೆ ನಡೆಸುತ್ತ, ರಸ್ತೆ ಬ್ಲಾಕ್ ಮಾಡಿದ್ದರು. ಅಲ್ಲಿ ಸುಮಾರು 15-20 ನಿಮಿಷ ಪ್ರಧಾನಿ ಸಿಲುಕಿಕೊಂಡರು. ಇದು ಗಂಭೀರ ಸ್ವರೂಪದ ಭದ್ರತಾ ಲೋಪ ಎಂದು ಹೇಳಿದೆ. ಅಷ್ಟೇ ಅಲ್ಲ, ಹೀಗೆ ಭದ್ರತಾ ಲೋಪ ಆಗುತ್ತಿದ್ದಂತೆ ಪಂಜಾಬ್​ ಸರ್ಕಾರ ಹೆಚ್ಚುವರಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿತು ಎಂದೂ ಅದು ತಿಳಿಸಿದೆ.

ಇದನ್ನೂ ಓದಿ: ಭದ್ರತಾ ಲೋಪ: ಪ್ರಧಾನಿ ಮೋದಿಯವರ ಪಂಜಾಬ್ ರ್ಯಾಲಿ ದಿಢೀರ್ ರದ್ದು

Published On - 4:46 pm, Wed, 5 January 22