ಭಾರತದಲ್ಲಿ ದಿನೇದಿನೆ ಕೊರೊನಾ ಪ್ರಕರಣ(Coronavirus)ಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಯಲ್ಲಿ 37, 379 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದು, ಇದು ಸೆಪ್ಟೆಂಬರ್ ಮೊದಲ ವಾರದ ನಂತರ ದಾಖಲಾದ ಅತಿಹೆಚ್ಚಿನ ಕೇಸ್ ಆಗಿದೆ. ಸದ್ಯ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 34,960,261ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 1,71,830 ಎಂದು ಕೇಂದ್ರ ಆರೋಗ್ಯ ಇಲಾಖೆ (Union Health Minister) ಮಾಹಿತಿ ನೀಡಿದೆ. ಹಾಗೇ, 24ಗಂಟೆಯಲ್ಲಿ 124 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,82,017ಕ್ಕೆ ತಲುಪಿದೆ.
ಒಟ್ಟಾರೆ ಕೊರೊನಾ ಕೇಸ್ನ ಶೇ.0.49ರಷ್ಟು ಸಕ್ರಿಯ ಪ್ರಕರಣಗಳು ಇವೆ. ಹಾಗೇ, ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳವವರ ಪ್ರಮಾಣ ಶೇ.98.13ರಷ್ಟಿದೆ. ದಿನದ ಪಾಸಿಟಿವಿಟಿ ರೇಟ್ ಶೇ.3.24ರಷ್ಟಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.2.05ರಲ್ಲಿದೆ. ಕಳೆದ 24ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 26,248 ಹೆಚ್ಚಾಗಿದೆ. ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ರೇಟ್ ಶೇ.1.38ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಾಗೇ, ಇದುವರೆಗೆ ಕೊರೊನಾ ಸೋಂಕಿನಿಂದ ಚೇತರಿಕೆ ಕಂಡವರ ಸಂಖ್ಯೆ 3,43,06,414ಕ್ಕೆ ಏರಿಕೆಯಾಗಿದೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಳ
ದೇಶದಲ್ಲಿ ಒಂದೆಡೆ ಕೊವಿಡ್ 19 ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೆ, ಇನ್ನೊಂದಡೆ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದಲ್ಲಿ ಒಟ್ಟಾರೆ 1892 ಒಮಿಕ್ರಾನ್ ಸೋಂಕಿತರು ಇದ್ದು, ಅದರಲ್ಲಿ 766 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಅಂದರೆ 568 ಒಮಿಕ್ರಾನ್ ಸೋಂಕಿನ ಪ್ರಕರಣಗಳಿವೆ. ಅದು ಬಿಟ್ಟರೆ ದೆಹಲಿಯಲ್ಲಿ 382, ಕೇರಳದಲ್ಲಿ 185, ಗುಜರಾತ್ನಲ್ಲಿ 152, ತಮಿಳುನಾಡು 121 ಮತ್ತು ರಾಜಸ್ಥಾನದಲ್ಲಿ 174 ಒಮಿಕ್ರಾನ್ ಸೋಂಕಿತರಿದ್ದಾರೆ.
ನಿನ್ನೆಯಿಂದ ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. 15-18ವರ್ಷದವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಅಭಿಯಾನ ಪ್ರಾರಂಭವಾದ ಮೊದಲ ದಿನ ಅಂದರೆ ಜ.3ರಂದು 41 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಾಗೇ, ದೇಶದಲ್ಲಿ ನಿನ್ನೆ ಒಂದೇ ದಿನ 98 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಾಗಿದ್ದು, ಇದುವರೆಗೆ ಒಟ್ಟಾರೆಯಾಗಿ 146.61 ಡೋಸ್ ಲಸಿಕೆ ನೀಡಲಾಗಿದೆ ಎಂದೂ ಸಚಿವಾಲಯ ಸವಿಸ್ತಾರ ಮಾಹಿತಿ ನೀಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ! ಇಂದು ಸಿಎಂ ಸಭೆ ಬಳಿಗೆ ಕಠಿಣ ನಿಯಮ ಜಾರಿ ಸಾಧ್ಯತೆ