ದೇಶದಲ್ಲಿ 200 ಕೊರೊನಾ ಸೋಂಕಿತರಲ್ಲಿ ಒಬ್ಬರಿಗೆ ಆಕ್ಸಿಜನ್ ಅಗತ್ಯ, ಶೇ.90ರಷ್ಟು ಬೆಡ್ಗಳ ಲಭ್ಯತೆ; ಇದು ಖಾಸಗಿ ಆಸ್ಪತ್ರೆಗಳ ದತ್ತಾಂಶದ ವರದಿ
ಆಸ್ಪತ್ರೆಯಲ್ಲಿ ಸೋಂಕಿತರು ಉಳಿಯಬೇಕಾದ ದಿನವೂ ಕಡಿಮೆಯಾಗಿದೆ. ಅಂದರೆ ಕೊವಿಡ್ 19 ಸೋಂಕಿತರು ಸರಾಸರಿ ಮೂರು ದಿನ ಉಳಿದು ಚಿಕಿತ್ಸೆ ಪಡೆಯಬೇಕಾಗಬಹುದು ಎಂದು ಎಎಚ್ಪಿಐನ ಡಾಟಾ ಮೂಲಕ ವಿಶ್ಲೇಷಿಸಲಾಗಿದೆ.
ಭಾರತದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಹಾಗಿದ್ದಾಗ್ಯೂ 200 ಕೊರೊನಾ ಸೋಂಕಿತರಲ್ಲಿ ಒಬ್ಬರಿಗೆ ಮಾತ್ರ ಆಕ್ಸಿಜನ್ (Oxygen) ಸಪೋರ್ಟ್ ಬೇಕಾಗುತ್ತಿದೆ ಎಂದು ಡಾಟಾವೊಂದು ಬಹಿರಂಗ ಪಡಿಸಿದೆ. ಅಂದಹಾಗೆ, ಇದು ಖಾಸಗಿ ಆಸ್ಪತ್ರೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಮಾತ್ರ ಆಧರಿಸಿ ನಡೆಸಿದ ಅಧ್ಯಯನವಾಗಿದೆ. 200 ಸೋಂಕಿತರಲ್ಲಿ ಒಬ್ಬರು ಖಾಸಗಿ ಆಸ್ಪತ್ರೆಗಲ್ಲಿ ಆಕ್ಸಿಜನ್ ಸಪೋರ್ಟ್ನಲ್ಲಿದ್ದಾರೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಮತ್ತು 2500 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 8000 ಸಣ್ಣ ಖಾಸಗಿ ಆಸ್ಪತ್ರೆಗಳನ್ನು ಪ್ರತಿನಿಧಿಸುವ ಅಸೋಸಿಯೇಷನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ ಇಂಡಿಯಾ(ಎಎಚ್ಪಿಐ) ಸಂಗ್ರಹಿಸಿದ ಮಾಹಿತಿ ಅನ್ವಯ, ದೇಶದಲ್ಲಿ ಸದ್ಯ ಶೇ.0.5ಕ್ಕಿಂತಲೂ ಕಡಿಮೆ ಪ್ರಮಾಣದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಬೆಂಬಲಿತ ಚಿಕಿತ್ಸೆ ಬೇಕಾಗುತ್ತಿದೆ ಎಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿ ಸೋಂಕಿತರು ಉಳಿಯಬೇಕಾದ ದಿನವೂ ಕಡಿಮೆಯಾಗಿದೆ. ಅಂದರೆ ಕೊವಿಡ್ 19 ಸೋಂಕಿತರು ಸರಾಸರಿ ಮೂರು ದಿನ ಉಳಿದು ಚಿಕಿತ್ಸೆ ಪಡೆಯಬೇಕಾಗಬಹುದು ಎಂದು ಎಎಚ್ಪಿಐನ ಡಾಟಾ ಮೂಲಕ ವಿಶ್ಲೇಷಿಸಲಾಗಿದೆ. ಅಂದಹಾಗೆ, ಈ ಎಎಚ್ಪಿಐ ಎಂಬುದು ದೇಶಾದ್ಯಂತ ಇರುವ ಫೋರ್ಟಿಸ್, ಮ್ಯಾಕ್ಸ್, ಅಪೊಲೋ, ಮೇದಾಂತಾ ಆಸ್ಪತ್ರೆಗಳನ್ನೂ ಒಳಗೊಂಡಿದೆ. ಹೀಗೆ ಖಾಸಗಿ ಆಸ್ಪತ್ರೆಗಳಿಂದ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತುಂಬ ಕಡಿಮೆ ಇದೆ.
ದೇಶದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಕೂಡ 37ಸಾವಿರಕ್ಕೂ ಅಧಿಕ ಕೇಸ್ಗಳು ದಾಖಲಾಗಿವೆ. ಅದರಲ್ಲೂ ಮಹಾರಾಷ್ಟ್ರ ಮತ್ತು ದೆಹಲಿಯಲ್ಲೇ ಹೆಚ್ಚಿನ ಕೇಸ್ಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಹೇರಳವಾಗಿದೆ. ಶೇ.90ರಷ್ಟು ಬೆಡ್ಗಳು ಖಾಲಿ ಇವೆ. ಇದೂ ಕೂಡ ಪ್ರಸ್ತುತ ಕೊರೊನಾ ತೀವ್ರತೆ ಕಡಿಮೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಮಹಾರಾಷ್ಟ್ರದ ಕೊರೊನಾ ಚಿಕಿತ್ಸೆ ಆಸ್ಪತ್ರೆಗಳಲ್ಲಿ ಶೇ.9-10ರಷ್ಟು ಬೆಡ್ಗಳು ಮಾತ್ರ ಪೂರ್ತಿಯಾಗಿವೆ. ದೆಹಲಿಯಲ್ಲಿ ಕೂಡ ಬೆಡ್ ಅಗತ್ಯತೆಯ ದರ ಶೇ.10 ರ ಕೆಳಗೇ ಇದೆ ಎಂದು ಉನ್ನತ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊವಿಡ್ 19 ಎರಡನೇ ಅಲೆಯ ವೇಳೆ ಆಮ್ಲಜನಕ ಮತ್ತು ಬೆಡ್ಗಳ ಕೊರತೆ ಮಿತಿಮೀರಿತ್ತು. ಆಕ್ಸಿಜನ್ ಪೂರೈಕೆಯೇ ದೊಡ್ಡ ಸವಾಲಾಗಿತ್ತು. ಆದರೆ ಈ ಬಾರಿ ಹಾಗೆ ಆಗಬಾರದು ಎಂಬ ಕಾರಣಕ್ಕೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದ. ದೇಶದಲ್ಲಿ ಆಕ್ಸಿಜನ್ ಅಗತ್ಯತೆಯನ್ನು ಎಎಚ್ಪಿಐ ಸದಾ ಮೇಲ್ವಿಚಾರಣೆ ಮಾಡುತ್ತಿದೆ. ಅದು ಶೇ.5ಕ್ಕೆ ತಲುಪಿದಾಗ ನಾವು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದೂ ಕೂಡ ಎಎಚ್ಪಿಐ ಮಾಹಿತಿ ನೀಡಿದೆ.
ಇದನ್ನೂ ಓದಿ: ಮನೆಯಲ್ಲೇ ಸೃಷ್ಟಿಯಾಯ್ತು ಪ್ರಕೃತಿಯ ಸೊಬಗು; ಟೆರೇಸ್ ಮೇಲೆ ಬಗೆ ಬಗೆಯ ತರಕಾರಿ, ಹೂಗಳ ಬೆಳೆದು ಸೈ ಎನಿಸಿಕೊಂಡ ಕೃಷ್ಣಪ್ಪ!