ಭಾರತದ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ವಿಫಲವಾಗಿದೆ. ಕಳೆದ 14 ದಿನಗಳಿಂದಲೂ ಇಸ್ರೋ ವಿಜ್ಞಾನಿಗಳು ನಿರಂತರವಾಗಿ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ರು, ಕೊನೆ ಕ್ಷಣದವರೆಗೂ ಲ್ಯಾಂಡರ್ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೆ ವಿಕ್ರಮ್ ಆಯುಷ್ಯ ಇಂದಿಗೆ ಅಂತ್ಯ ಹಿನ್ನೆಲೆಯಲ್ಲಿ ಲ್ಯಾಂಡರ್ ಸಂಪರ್ಕದ ಆಸೆಯನ್ನು ಇಸ್ರೋ ವಿಜ್ಞಾನಿಗಳು ಕೈಬಿಟ್ಟಿದ್ದಾರೆ.
ಸೆ.17ರಂದು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲೂನಾರ್, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯಬೇಕಿದ್ದ ಸ್ಥಳದ ಚಿತ್ರಗಳನ್ನು ಸೆರೆಹಿಡಿದಿದೆ. ನಾಸಾದ ಲೂನಾರ್ ರಿಕನೈಸನ್ಸ್ ಆರ್ಬಿಟರ್(ಎಲ್ಆರ್ಒ) ಚಿತ್ರಗಳನ್ನ ಸದ್ಯದಲ್ಲೇ ಹಂಚಿಕೊಳ್ಳಲಿದೆ. ಆದ್ರೆ ಕೆಲವು ವರದಿಗಳ ಪ್ರಕಾರ ವಿಕ್ರಮ್ ಲ್ಯಾಂಡರ್ ಇರುವಿಕೆ ಬಗ್ಗೆ ನಾಸಾ ಖಚಿತಪಡಿಸಿಲ್ಲ ಎನ್ನಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಾಸಾದ ಲೂನಾರ್ ಪ್ರದಕ್ಷಿಣೆ ವೇಳೆ ಅಲ್ಲಿ ಮುಸ್ಸಂಜೆಯಾಗಿತ್ತು. ಬೆಳಕಿನ ಪ್ರಮಾಣ ಕಡಿಮೆಯಾಗಿ ರಾತ್ರಿಗೆ ಹೊರಳುವ ಹೊತ್ತಿನಲ್ಲಿ ಚಿತ್ರಗಳನ್ನು ಎಲ್ಆರ್ಒ ಸೆರೆಹಿಡಿದಿತ್ತು.
ಜುಲೈ22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 ನಭಕ್ಕೆ ಜಿಗಿದಿತ್ತು. ಸುಮಾರು 47 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಚಂದ್ರನ ಕಡೆ ಹೊರಟಿದ್ದ ವಿಕ್ರಮ್, ಸೆಪ್ಟಂಬರ್ 7ರಂದು ಚಂದ್ರನ ಮೇಲೆ ಇಳಿಯಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ. ಅಂದಿನಿಂದ 14 ದಿನಗಳ ಕಾಲ ವಿಕ್ರಮ್ ಸಂಪರ್ಕಕ್ಕೆ ಯತ್ನಿಸಿದ ವಿಜ್ಞಾನಿಗಳ ಶ್ರಮ ವಿಫಲವಾಗಿದೆ.