ರಾತ್ರಿ 10ಗಂಟೆವರೆಗೂ ಕೊವಿಡ್ 19 ಲಸಿಕೆ ನೀಡಬಹುದು; ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಕೇಂದ್ರ ಸರ್ಕಾರದ ಸೂಚನೆ

| Updated By: Lakshmi Hegde

Updated on: Jan 10, 2022 | 3:36 PM

ದೇಶದಲ್ಲಿ ಇಲ್ಲಿಯವರೆಗೆ 151.94 ಕೋಟಿ ಡೋಸ್​ ಲಸಿಕೆ ನೀಡಲಾಗಿದೆ.  ಇಂದಿನಿಂದ ಆಯ್ದ ವರ್ಗಗಳ ಫಲಾನುಭವಿಗಳಿಗೆ ಕೊರೊನಾ ಲಸಿಕೆ ಮೂರನೇ ಡೋಸ್​ ಕೂಡ ನೀಡಲಾಗುತ್ತಿದೆ. ಹಾಗೇ ಇನ್ನೊಂದೆಡೆ 15-18 ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಿದೆ.

ರಾತ್ರಿ 10ಗಂಟೆವರೆಗೂ ಕೊವಿಡ್ 19 ಲಸಿಕೆ ನೀಡಬಹುದು; ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಕೇಂದ್ರ ಸರ್ಕಾರದ ಸೂಚನೆ
ಸಾಂಕೇತಿಕ ಚಿತ್ರ
Follow us on

ಕೊವಿಡ್​ 19 ಲಸಿಕೆ ನೀಡುವ ಕೇಂದ್ರಗಳಿಗೆ ಸಮಯ ಮಿತಿ ಇಲ್ಲ. ರಾತ್ರಿ 10ಗಂಟೆವರೆಗೂ ಕೊರೊನಾ ಲಸಿಕೆ(Corona Vaccine)ಯನ್ನು ಕೊಡಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ, ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.  ಸಂಜೆಯೊಳಗೆ ಲಸಿಕಾ ಕೇಂದ್ರಗಳನ್ನು ಬಂದ್​ ಮಾಡಬೇಕು ಎಂದು ಎಲ್ಲಿಯೂ ನಿಮಗಳಿಲ್ಲ, ಆಯಾ ರಾಜ್ಯಗಳ, ಆಯಾ ಪ್ರದೇಶಗಳಲ್ಲಿನ ಬೇಡಿಕೆ, ಅಗತ್ಯಗಳಿಗೆ ತಕ್ಕಂತೆ ಕೊವಿಡ್ 19 ಲಸಿಕೆ ನೀಡುವ ಸಮಯವನ್ನು ನಿಗದಿಗೊಳಿಸಿಕೊಳ್ಳಬಹುದು. ಲಸಿಕಾ ಕೇಂದ್ರಗಳಲ್ಲಿ ಸುಮ್ಮನೆ ಒತ್ತಡಕ್ಕೆ ಒಳಗಾಗುವ ಬದಲು, ಜನರು ಹೆಚ್ಚಿದ್ದರೂ ಕೊರೊನಾ ಲಸಿಕೆ ನೀಡುವ ಅವಧಿ ಮುಗಿಯಿತು ಎಂದು ಹೇಳಿ ಕಳಿಸುವ ಬದಲು, ಅಗತ್ಯಕ್ಕನುಗುಣವಾಗಿ ರಾತ್ರಿ 10ರವರೆಗೂ ಕೊರೊನಾ ಲಸಿಕೆ ನೀಡಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ ಮನೋಹರ್ ಅಗ್ನಾನಿ ತಿಳಿಸಿದ್ದಾರೆ.  ಕೊವಿಡ್​ 19 ಲಸಿಕೆ ಕೇಂದ್ರಗಳ ಕಾರ್ಯಾಚರಣೆಗೆ ಸಮಯ ನಿಗದಿಯಿಲ್ಲ. ಆ ಕೇಂದ್ರಗಳಲ್ಲಿ ಬೇಡಿಕೆ ಮತ್ತು ಅಗತ್ಯತೆ ಎಷ್ಟಿದೆ ಎಂಬುದನ್ನು ಸ್ಥಳೀಯ ಅಧಿಕಾರಿಗಳೇ ನೋಡಿಕೊಳ್ಳಬೇಕು ಎಂದು ಅಗ್ನಾನಿ ಹೇಳಿದ್ದಾರೆ.  

ದೇಶದಲ್ಲಿ ಇಲ್ಲಿಯವರೆಗೆ 151.94 ಕೋಟಿ ಡೋಸ್​ ಲಸಿಕೆ ನೀಡಲಾಗಿದೆ.  ಇಂದಿನಿಂದ ಆಯ್ದ ವರ್ಗಗಳ ಫಲಾನುಭವಿಗಳಿಗೆ ಕೊರೊನಾ ಲಸಿಕೆ ಮೂರನೇ ಡೋಸ್​ ಕೂಡ ನೀಡಲಾಗುತ್ತಿದೆ. ಹಾಗೇ ಇನ್ನೊಂದೆಡೆ 15-18 ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಿದೆ. ಇದೀಗ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಆರ್ಭಟ ಶುರುವಾಗಿದ್ದರಿಂದ ಲಸಿಕೆ ನೀಡುವ ವೇಗವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯ ಇರುವುದಿರಿಂದ ಕೊವಿಡ್ 19 ಲಸಿಕೆ ಕೇಂದ್ರಗಳ ಸಮಯವನ್ನು ವಿಸ್ತರಿಸಿಕೊಳ್ಳುವುದು ಅವಶ್ಯಕ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಇಂದು ಒಂದೇ ದಿನ 1,79,723 ಕೊರೊನಾ ಕೇಸ್​ಗಳು ದಾಖಲಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ  3,57,07,727ಕ್ಕೆ ಏರಿಕೆಯಾಗಿದೆ. ಒಮಿಕ್ರಾನ್​ ಪ್ರಕರಣಗಳ ಸಂಖ್ಯೆಯೂ ಕೂಡ 4033ಕ್ಕೆ ತಲುಪಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಕ್ರಿಯ ಪ್ರಕರಣಗಳು 7,23,619 ಆಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 4,83,936 ಎಂದು ಕೇಂದ್ರ ಆರೋಗ್ಯ ಇಲಾಖೆ ವಿವರಿಸಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉನ್ನತಮಟ್ಟದ ಸಭೆ ನಡೆಸಿದ್ದಾರೆ.  ಕೊವಿಡ್​ 19 ಹರಡುವಿಕೆ ತಡೆಯಲು ಮಾಸ್​​ನ್ನು ಕಡ್ಡಾಯವಾಗಿ ಬಳಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂಬಿತ್ಯಾದಿ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿದೆಯಾ ಎಂಬುದನ್ನು ಆಯಾ ಸರ್ಕಾರ, ಆಡಳಿತಗಳು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ತೊರೆದ ಗೋವಾ ಸಚಿವ ಮೈಕೆಲ್ ಲೋಬೊ, ಕಾಂಗ್ರೆಸ್ ಸೇರುವ ನಿರೀಕ್ಷೆ