ಇತ್ತೀಚೆಗೆ ಬುಲ್ಲಿ ಬಾಯ್ ಆ್ಯಪ್ ಭರ್ಜರಿ ಸುದ್ದಿ ಮಾಡುತ್ತಿದೆ. ಈ ಆ್ಯಪ್ ಮೂಲಕ ನೂರಾರು ಮುಸ್ಲಿಂ ಮಹಿಳೆಯರು, ವೈದ್ಯರನ್ನು ಹರಾಜು ಹಾಕಲಾಗಿತ್ತು. ಇದು ನಿಜವಾದ ಹರಾಜು ಪ್ರಕ್ರಿಯೆ ಅಲ್ಲದೆ ಇದ್ದರೂ, ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ, ಅವರಿಗೆ ಗೊತ್ತಿಲ್ಲದೆ ಫೋಟೋ ಹಾಕಲಾಗಿತ್ತು. ಅಷ್ಟೇ ಅಲ್ಲ, ಕೆಟ್ಟದಾಗಿ ಕೀಳುಮಟ್ಟದ ಕಾಮೆಂಟ್ಗಳನ್ನೂ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸದ್ಯ ಒಟ್ಟು ಮೂವರನ್ನು ಬಂಧಿಸಿದ್ದಾರೆ. ಅವರೆಲ್ಲರೂ ಯುವಜನರೇ ಆಗಿದ್ದಾರೆ. ಬುಲ್ಲಿ ಬಾಯ್ ಕೇಸ್ಗೆ ಸಂಬಂಧಿಸಿದಂತೆ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ (21ವರ್ಷ)ಯೊಬ್ಬನನ್ನು ಬಂಧಿಸಲಾದ ಬೆನ್ನಲ್ಲೇ, ಮುಂಬೈ ಪೊಲೀಸರು 18 ವರ್ಷದ ವಿದ್ಯಾರ್ಥಿನಿ ಶ್ವೇತಾ ಸಿಂಗ್ ಎಂಬಾಕೆಯನ್ನು ಮಂಗಳವಾರ ಅರೆಸ್ಟ್ ಮಾಡಿದ್ದರು. ಈ ಬುಲ್ಲಿ ಬಾಯ್ ಆ್ಯಪ್ ಕೇಸ್ನಲ್ಲಿ ಇವಳೇ ಮಾಸ್ಟರ್ಮೈಂಡ್ ಎನ್ನಲಾಗಿದೆ. ಅದರ ಬೆನ್ನಲ್ಲೇ, ಇಂದು ಮತ್ತೊಬ್ಬ ಯುವಕನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ ಅರೆಸ್ಟ್ ಆದವರು ಶ್ವೇತಾ ಸಿಂಗ್ (18), ಮಯಾಂಕ್ ರಾವಲ್ (21) ಮತ್ತು ವಿಶಾಲ್ ಕುಮಾರ್ ಝಾ (21) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಶ್ವೇತಾ ಮತ್ತು ಮಯಾಂಕ್ ಉತ್ತರಾಖಂಡ್ನಿಂದ ಬಂಧಿತರಾಗಿದ್ದರೆ, ವಿಶಾಲ್ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾನೆ.
ಶ್ವೇತಾ ಸಿಂಗ್ ಯಾರು?
ಒಟ್ಟಾರೆ ಬುಲ್ಲಿ ಬಾಯ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಶ್ವೇತಾ ಸಿಂಗ್ ಎಂದು ಹೇಳಲಾಗಿದೆ. ಈಕೆ ಉತ್ತರಪ್ರದೇಶದ ಬುಲಂದ್ಶಹರ್ ಜಿಲ್ಲೆಯವಳು. ವಾಸ್ತವದಲ್ಲಿ ತುಂಬ ಬಡಕುಟುಂದವಳು. ಈಕೆಗೆ ತಂದೆ-ತಾಯಿ ಇಬ್ಬರೂ ಇಲ್ಲ. 2011ರಲ್ಲಿಯೇ ತಾಯಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. ಇನ್ನು ತಂದೆ ಕಳೆದ ವರ್ಷ ಕೊವಿಡ್ 19 ನಿಂದ ಸಾವನ್ನಪ್ಪಿದ್ದಾರೆ. ಸದ್ಯ ಇವಳನ್ನು ಮುಂಬೈ ಪೊಲೀಸರು ನಿನ್ನೆ ಉತ್ತರಾಖಂಡ್ನ ಉಧಾಮ್ ಸಿಂಗ್ ನಗರದಲ್ಲಿ ಬಂಧಿಸಿದ್ದಾರೆ. ಶ್ವೇತಾಗೆ ಒಬ್ಬಳು ಅಕ್ಕ, ಇನ್ನೊಬ್ಬಳು ತಂಗಿ ಮತ್ತು ಒಬ್ಬ ಸಹೋದರನಿದ್ದಾನೆ. ಇವರೆಲ್ಲ ಉತ್ತರಾಖಂಡ್ನಲ್ಲೇ ವಾಸವಾಗಿದ್ದರು. ಈಕೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿದ್ದಳು. ಶ್ವೇತಾ, JattKhalsa07 ಎಂಬ ಫೇಕ್ ಟ್ವಿಟರ್ ಅಕೌಂಟ್ ಹೊಂದಿದ್ದಳು. ಅದರಲ್ಲಿ ಹೀಗೆ ಅವಹೇಳನಕಾರಿ ಫೋಟೋಗಳು, ಪೋಸ್ಟ್ಗಳು, ಕಾಮೆಂಟ್ಗಳನ್ನು ಮಾಡಲಾಗುತ್ತಿತ್ತು. ಆಕೆಯೊಂದಿಗೆ ಇನ್ನೂ ಹಲವರು ಇದ್ದಾರೆ. ಇಂಥ ಕೆಲಸಗಳನ್ನು ಮಾಡಲು ಶ್ವೇತಾಗೆ ಮಾರ್ಗದರ್ಶನ ಮಾಡುತ್ತಿರುವುದು ನೇಪಾಳದಲ್ಲಿರುವ ಆಕೆಯ ಫ್ರೆಂಡ್ ಎಂದು ಹೇಳಲಾಗಿದೆ. ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅರೆಸ್ಟ್ ಆದ ವಿಶಾಲ್ ಮತ್ತು ಶ್ವೇತಾ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಆದವರು. ಇವರಿಬ್ಬರು ಸೇರಿ ಆ್ಯಪ್ ಕ್ರಿಯೇಟ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗೇ, ಇವರೆಲ್ಲ ಸೇರಿ ಒಟ್ಟು ನಾಲ್ಕು ಟ್ವಿಟರ್ ಅಕೌಂಟ್ಗಳನ್ನು ಇಂಥ ಫೋಟೋ, ಪೋಸ್ಟ್ಗಳನ್ನು ಹಾಕಲು ಬಳಸುತ್ತಿದ್ದರು ಎಂದೂ ಹೇಳಿದ್ದಾರೆ. ಹಾಗೇ, ಈ ನಾಲ್ಕರಲ್ಲಿ ಮೂರನ್ನು ಶ್ವೇತಾ ಬಳಸುತ್ತಿದ್ದಳು. ಮತ್ತೊಂದನ್ನು ವಿಶಾಲ್ ಬಳಸುತ್ತಿದ್ದ ಎಂದು ತಿಳಿಸಿದ್ದಾರೆ. ಈ ವಿಶಾಲ್ Khalsa Supremacist ಸಿಖ್ ಹೆಸರಲ್ಲಿ ಅಕೌಂಟ್ ಹೊಂದಿದ್ದ. ಡಿಸೆಂಬರ್ 31ರಂದು ಅದರ ಹೆಸರನ್ನು Justice for Sikh ಎಂದು ಬದಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ; ಶನಿವಾರ, ಭಾನುವಾರ ಎಂದಿನಂತೆ ಮೆಟ್ರೋ ರೈಲು ಸಂಚರಿಸಲಿದೆ