ಜಾರ್ಖಂಡ್​​ನಲ್ಲಿ ಭೀಕರ ಗುಂಪುಹತ್ಯೆ: ಎಷ್ಟೇ ಬೇಡವೆಂದರೂ ಮರ ಕಡಿದ ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು

ಈ ಗ್ರಾಮದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಇರುವ ಒಂದಷ್ಟು ಮರಗಳು ಧಾರ್ಮಿಕವಾಗಿ ಪವಿತ್ರವಾದವುಗಳು. ಅವು ಬಿದ್ದರೆ, ಅವುಗಳನ್ನು ಕಡಿದರೆ ಕೆಡುಕಾಗುತ್ತದೆ ಎಂಬುದು ಅಲ್ಲಿನವರ ನಂಬಿಕೆ.

ಜಾರ್ಖಂಡ್​​ನಲ್ಲಿ ಭೀಕರ ಗುಂಪುಹತ್ಯೆ: ಎಷ್ಟೇ ಬೇಡವೆಂದರೂ ಮರ ಕಡಿದ ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 05, 2022 | 2:22 PM

ಜಾರ್ಖಂಡದ ಸಿಮ್ಡೆಗಾ ಜಿಲ್ಲೆಯ ಹಳ್ಳಿಯೊಂದರಲ್ಲಿ 32 ವರ್ಷದ ಯುವಕನನ್ನು ಸ್ಥಳೀಯರು ಗುಂಪಾಗಿ ಹೊಡೆದು (lynched In Jharkhand )ಕೊಂದಿದ್ದಾರೆ. ಸಂಜು ಪ್ರಧಾನ್​ ಎಂಬಾತ ಮೃತ ಯುವಕ. ಈತ ಮರ ಕಡಿದಿದ್ದರಿಂದ ಕೋಪಗೊಂಡ ಸ್ಥಳೀಯರು ಅವನಿಗೆ ಹೊಡೆದಿದ್ದಾರೆ. ಸಂಜು ಕಡಿದಿದ್ದು ಪವಿತ್ರವಾದ ಮರ, ಅದನ್ನು ಕಡಿಯುವುದು, ಹಾನಿಮಾಡುವುದು ಧರ್ಮನಿಂದನೆಗೆ ಸಮಾನ. ಆದರೆ ಈತ ಅದನ್ನೇ ಕಡಿದು, ಕಟ್ಟಿಗೆಯನ್ನು ಕದ್ದೊಯ್ಯಲು ಹೊರಟಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾಗಿ ಪೊಲೀಸು ಮಾಹಿತಿ ನೀಡಿದ್ದಾರೆ. 

ಸಂಜು ಪ್ರಧಾನ್​​ನನ್ನು ಆತನ ಮನೆಯಿಂದ ಕೇವಲ 100 ಮೀಟರ್​ ದೂರದಲ್ಲಿ ಹೊಡೆದು ಕೊಲ್ಲಲಾಗಿದೆ. ಮನೆಯ ಬಳಿ ಹೋಗಿ ಮೊದಲು ಆತನನ್ನು ಹೊರಗೆ ಕರೆದಿದ್ದಾರೆ. ನಂತರ ಅವನಿಗೆ ಒಂದೇ ಸಮ ಕಲ್ಲಿನಿಂದ ಹೊಡೆದಿದ್ದಾರೆ. ಆತ ಜೀವ ಬಿಟ್ಟ ಬಳಿಕ ಅಲ್ಲೇ ಕಟ್ಟಿಗೆಯನ್ನು ಒಟ್ಟು ಮಾಡಿ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಕೊಲೆಬಿರಾ ಪೊಲೀಸ್​ ಠಾಣೆ ಮುಖ್ಯಸ್ಥ ರಾಮೇಶ್ವರ್​ ಭಗತ್​ ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಇರುವ ಒಂದಷ್ಟು ಮರಗಳು ಧಾರ್ಮಿಕವಾಗಿ ಪವಿತ್ರವಾದವುಗಳು. ಅವು ಬಿದ್ದರೆ, ಅವುಗಳನ್ನು ಕಡಿದರೆ ಕೆಡುಕಾಗುತ್ತದೆ ಎಂಬುದು ನಮ್ಮ ನಂಬಿಕೆ. ಹಿಂದೆ ಎರಡು-ಮೂರು ಬಾರಿ ಈ ಸಂಜುಗೆ ಕಡಿಯದಂತೆ ಹೇಳಲಾಗಿತ್ತು. ಆದರೆ ಆತ ಅದನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಅರಣ್ಯ ಇಲಾಖೆಯವರಿಗೂ ಹೇಳಿದ್ದೆವು. ಅವರೂ ಕೂಡ ಯಾವುದೇ ಕ್ರಮಗಳನ್ನೂ ಕೈಗೊಳ್ಳಲಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೆ ಅಲ್ಲ, ಮತ್ತೊಮ್ಮೆ ಸಂಜು ಮರ ಕಡಿದಾಗ ಆಕ್ರೋಶಗೊಂಡು ಅವನಿಗೆ ಹೊಡೆದಿದ್ದಾರೆ. ತೀವ್ರಗಾಯಗೊಂಡ ಅವನು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಪ್ರಸಕ್ತ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಜಾರ್ಖಂಡ ಸಿಎಂ ಹೇಮಂತ್​ ಸೊರೆನ್, ಸಿಮ್ಡೆಗಾ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ನಿರ್ಣಯ ಅಂಗೀಕಾರ ಗುಂಪು ಹಿಂಸಾಚಾರ ತಡೆ ಮತ್ತು ಗುಂಪು ಹತ್ಯೆ ವಿರೋಧಿ ಮಸೂದೆ(Mob Lynching Bill 2021)ಯನ್ನು ಇತ್ತೀಚೆಗಷ್ಟೇ  ಜಾರ್ಖಂಡ ವಿಧಾನಸಭೆ ಅಂಗೀಕರಿಸಿದೆ. ಅದರ ಅನ್ವಯ ಗುಂಪು ಹತ್ಯೆಯಲ್ಲಿ ಪಾಲ್ಗೊಳ್ಳುವರಿಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಷ್ಟೇ ಅಲ್ಲ ಅವರಿಗೆ ದಂಡ ವಿಧಿಸುವ ಜತೆ, ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಮೃತರ ಕುಟುಂಬಗಳಿಗೆ ಬೆದರಿಕೆ ಹಾಕುವವರು, ಸುಳ್ಳು ಸಾಕ್ಷಿ ಹೇಳುವವರಿಗೆ ಕೂಡ ಶಿಕ್ಷೆ ನೀಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಕುಳಿತು ನೋಡಬಹುದು ‘ಪುಷ್ಪ’ ಚಿತ್ರ; ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ಗೆ ದಿನಾಂಕ ನಿಗದಿ