ಲಕ್ನೋ: ಕೆಲದಿನಗಳ ಹಿಂದಷ್ಟೇ ವಾಮಾಚಾರಕ್ಕಾಗಿ ಬಾಲಕಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಬೇರ್ಪಡಿಸಿದ ಅಮಾನುಷ ಕೃತ್ಯಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿತ್ತು. ಆ ಘಟನೆಯ ಕರಾಳ ನೆನಪು ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ರಾಜ್ಯದ ಮಿರ್ಜಾಪುರ ಬಳಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಒಂದೇ ಕುಟುಂಬಕ್ಕೆ ಸೇರಿದ ಮೂವರು ಬಾಲಕರು ಶವವಾಗಿ ಪತ್ತೆ
ಮಿರ್ಜಾಪುರ ಜಿಲ್ಲೆಯ ಬಾಮಿ ಪ್ರದೇಶದ ಬಳಿ ಒಂದೇ ಕುಟುಂಬಕ್ಕೆ ಸೇರಿದ ಮೂವರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಶವಗಳಿಂದ ಅವರ ಕಣ್ಣುಗಳನ್ನು ಕಿತ್ತು ಹಾಕಿರುವಂತೆ ಕಂಡುಬಂದಿದ್ದು ಮೃತ ಬಾಲಕರ ಕುಟುಂಬಸ್ಥರು ಇದು ಕೊಲೆಯೆಂದು ಆರೋಪಿಸಿದ್ದಾರೆ.
ಒಂದೇ ಕುಟುಂಬಕ್ಕೆ ಸೇರಿದ ಮೂವರು ಬಾಲಕರು ಸಂಬಂಧದಲ್ಲಿ ಸಹೋದರರಾಗಿದ್ದು ಮೃತರನ್ನು ಸುಧಾಂಶು ತಿವಾರಿ (14), ಶಿವಂ ತಿವಾರಿ (14) ಹಾಗೂ ಹರಿ ಓಂ ತಿವಾರಿ (14) ಎಂದು ಗುರುತಿಸಲಾಗಿದೆ. ಇವರ ಮೃತದೇಹ ಊರಿನ ಹತ್ತಿರದ ತೊರೆಯ ಬಳಿ ಪತ್ತೆಯಾಗಿದೆ.
ಹಣ್ಣು ತರುತ್ತೇವೆಂದು ಹೋದವರು ಹೆಣವಾಗಿ ಮರಳಿದರು
ಕುಟುಂಬಸ್ಥರು ಹೇಳುವ ಪ್ರಕಾರ ಬಾಲಕರು ಹಣ್ಣು ತರುವುದಾಗಿ ಕಳೆದ ಮಂಗಳವಾರದಂದು ಕಾಡಿಗೆ ಹೋಗಿದ್ದರು. ಆದರೆ, ಬಹಳ ಹೊತ್ತಾದರೂ ಹುಡುಗರು ಮರಳಿ ಬಾರದಿದ್ದಾಗ ಆತಂಕಗೊಂಡ ಪೋಷಕರು ಸ್ಥಳೀಯರೊಂದಿಗೆ ಸೇರಿ ರಾತ್ರಿಯಿಡಿ ಬಾಲಕರಿಗಾಗಿ ಹುಡುಕಾಟ ನಡೆಸಿದ್ದಾರೆ. ತಡರಾತ್ರಿಯ ತನಕ ಹುಡುಕಿದರೂ ಹುಡುಗರು ಪತ್ತೆಯಾಗಿಲ್ಲ.
ಕಳೆದ ಬುಧವಾರದಂದು ಮತ್ತೆ ಹುಡುಕಾಟ ಶುರುಮಾಡಿದಾಗ ವಿಂಧ್ಯಾಚಲ ಪ್ರದೇಶದ ಬಳಿ ಬಾಲಕನೊಬ್ಬನ ಬಟ್ಟೆ ಸಿಕ್ಕಿದೆ. ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಬಂದ ಪೋಷಕರು ಮತ್ತು ಪೊಲೀಸರು ಅಲ್ಲೇ ಹುಡುಕಾಟ ನಡೆಸಿದಾಗ ಮೂವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಜೊತೆಗೆ, ಬಾಲಕರ ಮೃತದೇಹಗಳಿಂದ ಅವರ ಕಣ್ಣುಗಳನ್ನು ಕಿತ್ತಿರುವುದು ಸಹ ಕಂಡುಬಂದಿತು ಎಂದು ಹೇಳಲಾಗಿದೆ. ಜೊತೆಗೆ, ಶವದ ಮೇಲೆ ಗಾಯದ ಗುರುತುಗಳು ಸಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಬಾಲಕರ ಮೃತದೇಹ ಕಂಡು ಇದು ಕೊಲೆಯೆಂದು ಹೇಳಿರುವ ಕುಟುಂಬಸ್ಥರು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಹೆದ್ದಾರಿ ತಡೆದು ಪ್ರತಿಭಟಿಸಿದ್ದಾರೆ. ಆದರೆ, ಕುಟುಂಬಸ್ಥರ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು ಬಾಲಕರು ನೀರಿನಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ನೇತ್ರಹೀನ ಸ್ಥಿತಿಯಲ್ಲಿರುವ ಬಾಲಕರ ಮೃತದೇಹಗಳ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು ಅನೇಕರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು’
ಆದರೆ, ಈ ಎಲ್ಲಾ ಆಪಾದನೆಗಳನ್ನು ತಳ್ಳಿ ಹಾಕಿರುವ ಮಿರ್ಜಾಪುರ ಪೊಲೀಸ್ ಆಯುಕ್ತರು ಶವಗಳನ್ನು ಹೊರತೆಗೆಯುವ ವೇಳೆ ಸ್ಥಳದಲ್ಲಿ ನಾವೂ ಇದ್ದೆವು. ಅಮಾನುಷವಾಗಿ ಕೊಲೆ ಮಾಡಲಾಗಿದೆ ಅಥವಾ ಕಣ್ಣು ಕೀಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು. ಮೃತದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮರಣೋತ್ತರ ಪರೀಕ್ಷೆಯ ನಂತರ ಬಾಲಕರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಸಹ ಆಯುಕ್ತರು ತಿಳಿಸಿದ್ದಾರೆ. ಸದ್ಯ ಪ್ರಕರಣದ ಸುತ್ತ ತೀವ್ರ ತನಿಖೆಯನ್ನು ನಡೆಸಲಿದ್ದೇವೆ ಎಂದೂ ಸಹ ಹೇಳಿದ್ದಾರೆ.
ಯೋಗಿ ನಾಡಲ್ಲಿ 6ರ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ಯಕೃತ್ತನ್ನು ಕಿತ್ತ ನೀಚರು