ಜಮ್ಮು ಕಾಶ್ಮೀರದಲ್ಲಿ ಕತ್ತು ಸೀಳಿ ಹಿರಿಯ ಐಪಿಎಸ್​ ಅಧಿಕಾರಿಯ ಬರ್ಬರ ಹತ್ಯೆ; ಮನೆ ಕೆಲಸದವನು ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Oct 04, 2022 | 10:07 AM

ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಅಸ್ಸಾಂ ಮೂಲದವರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವಾಗಲೇ ಈ ಕೊಲೆ ನಡೆದಿದೆ.

ಜಮ್ಮು ಕಾಶ್ಮೀರದಲ್ಲಿ ಕತ್ತು ಸೀಳಿ ಹಿರಿಯ ಐಪಿಎಸ್​ ಅಧಿಕಾರಿಯ ಬರ್ಬರ ಹತ್ಯೆ; ಮನೆ ಕೆಲಸದವನು ನಾಪತ್ತೆ
ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ (IPS Officer Hemant Lohia) ನಿನ್ನೆ (ಸೋಮವಾರ) ರಾತ್ರಿ ಜಮ್ಮುವಿನ (Jammu) ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕತ್ತು ಸೀಳಿದ ರೀತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಮೃತದೇಹದ ಮೇಲೆ ಸುಟ್ಟ ಗಾಯಗಳು ಕೂಡ ಇವೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೊಲೆ (Murder) ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ. ಟಿಆರ್​ಎಫ್ ಉಗ್ರ ಸಂಘಟನೆ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರ ಸ್ವಂತ ಮನೆ ನವೀಕರಣಗೊಳ್ಳುತ್ತಿರುವುದರಿಂದ ತಮ್ಮ ಕುಟುಂಬದೊಂದಿಗೆ ತಮ್ಮ ಸ್ನೇಹಿತ ರಾಜೀವ್ ಖಜುರಿಯಾ ಅವರ ಮನೆಯಲ್ಲಿ ವಾಸವಾಗಿದ್ದರು. ಅದೇ ಮನೆಯಲ್ಲಿ ನಿನ್ನೆ ರಾತ್ರಿ ಕೊಲೆ ನಡೆದಿದೆ. ಅವರ ಮನೆಯ ಕೆಲಸದಾಳು ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಶುರುವಾಗಿದೆ. ತಮಗೆ ಸಹಾಯವಾಗಲೆಂದು ತಮ್ಮ ಮನೆಯ ಕೆಲಸ ವ್ಯಕ್ತಿಯಾಗಿದ್ದ ಯಾಸಿರ್​​ನನ್ನು ಕೂಡ ತಮ್ಮ ಗೆಳೆಯನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆತ ಈಗ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Jammu and Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಲಷ್ಕರ್ ಉಗ್ರರ ಬಂಧನ

ಡಿಜಿಪಿ ಹೇಮಂತ್ ಅವರ ಮನೆಯ ಕೆಲಸದಾಳುವನ್ನು ಮೂಲತಃ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಗೆ ಸೇರಿದ ಯಾಸಿರ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಅಸ್ಸಾಂ ಮೂಲದವರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವಾಗಲೇ ಈ ಕೊಲೆ ನಡೆದಿದೆ.

1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಹೇಮಂತ್ ಲೋಹಿಯಾ ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ಕತ್ತು ಸೀಳಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಆಗಸ್ಟ್‌ನಲ್ಲಿ ಡಿಜಿಪಿ ಕಾರಾಗೃಹಕ್ಕೆ ನಿಯೋಜಿಸಲಾಗಿತ್ತು. ಅವರ ಮೈಮೇಲೆ ಸುಟ್ಟ ಗಾಯಗಳೂ ಪತ್ತೆಯಾಗಿವೆ. ಈ ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಮೂವರು ಉಗ್ರರ ಎನ್​ಕೌಂಟರ್

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, ಕೊಲೆ ನಡೆದ ಸ್ಥಳದ ಪ್ರಾಥಮಿಕ ಪರೀಕ್ಷೆಯನ್ನು ಮಾಡಲಾಗಿದ್ದು, ಕೊಲೆಗಾರ ಹೇಮಂತ್ ಲೋಹಿಯಾ ಅವರ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಆತ ಮುರಿದ ಕೆಚಪ್ ಬಾಟಲಿಯಿಂದ ಅವರ ಕತ್ತು ಸೀಳಿದ್ದಾನೆ. ನಂತರ ಅವರ ದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ. ಅರೆಬರೆ ಸುಟ್ಟ ಗಾಯಗಳು ಮೃತದೇಹದ ಮೇಲೆ ಕಂಡುಬಂದಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 am, Tue, 4 October 22