West Bengal Assembly Elections 2021: ನಂದಿಗ್ರಾಮದಲ್ಲಿ 8 ಕಿಮೀ ಪಾದಯಾತ್ರೆಯನ್ನು ಗಾಲಿಕುರ್ಚಿಯಲ್ಲೇ ಕುಳಿತು ಮುನ್ನಡೆಸಿದ ಮಮತಾ ಬ್ಯಾನರ್ಜಿ

|

Updated on: Mar 29, 2021 | 4:24 PM

Mamata Banerjee in Nandigram: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಾವು ಬೆಂಬಲಿಸುವುದಿಲ್ಲ. ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂದು ಟ್ವೀಟ್ ಮಾಡಿ ಅಮಿತ್ ಶಾ ಕೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾವ ಪರಿಸ್ಥಿತಿ ಇದೆ?  ಹಾಥರಸ್​ನಲ್ಲಿ ಏನು ನಡೆಯುತ್ತಿದೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

West Bengal Assembly Elections 2021: ನಂದಿಗ್ರಾಮದಲ್ಲಿ 8 ಕಿಮೀ ಪಾದಯಾತ್ರೆಯನ್ನು ಗಾಲಿಕುರ್ಚಿಯಲ್ಲೇ ಕುಳಿತು ಮುನ್ನಡೆಸಿದ ಮಮತಾ ಬ್ಯಾನರ್ಜಿ
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಎರಡನೇ ಹಂತದ ಮತದಾನಕ್ಕೆ ಸಿದ್ಧವಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೋಮವಾರ ಇಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಮಮತಾ 8 ಕಿಮೀ ಪಾದಯಾತ್ರೆಗೆ ಗಾಲಿಕುರ್ಚಿಯಲ್ಲಿ ಕುಳಿತು ಮುಂದಾಳತ್ವ ವಹಿಸಿದ್ದಾರೆ. ಏಪ್ರಿಲ್ 1 ಗುರುವಾರ ನಂದಿಗ್ರಾಮದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಕಣದಲ್ಲಿದ್ದಾರೆ. ಗಾಲಿ ಕುರ್ಚಿಯಲ್ಲಿ ಕುಳಿತು ಮಮತಾ ಪಾದಯಾತ್ರೆಯ ಮುಂದೆ ಸಾಗುತ್ತಿದ್ದರೆ,  ಅವರ ಹಿಂದೆಯ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಘೋಷಣೆ ಕೂಗುತ್ತಾ ಬರುತ್ತಿರುವ ವಿಡಿಯೊವನ್ನು ತೃಣಮೂಲ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದೆ.

ಮಾರ್ಚ್ ತಿಂಗಳ ಆರಂಭದಲ್ಲಿ ನಂದಿಗ್ರಾಮದಲ್ಲಿ ಕಾರಿನಲ್ಲಿ ನಿಂತು ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಜನರ ಗುಂಪೊಂದು ತಳ್ಳಿದ್ದರಿಂದ ಕಾರಿನ ಬಾಗಿಲು ಬಡಿದು ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯಗಳಾಗಿತ್ತು. ಚುನಾವಣಾ ಪ್ರಚಾರದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಮತಾ ಆರೋಪಿಸಿದ್ದರು. ಈಗಲೂ ಮಮತಾ ಬ್ಯಾನರ್ಜಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ.

ನಂದಿಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಅತಿ ಆಸೆ ಸಲ್ಲದು. ಅವರು (ಸುವೇಂದು ಅಧಿಕಾರಿ ಕುಟುಂಬ) ಅಲ್ಲಿಯೂ ಸಲ್ಲ, ಇಲ್ಲಿಯೂ ಸಲ್ಲ ಎಂಬಂತೆ ಆಗಿಬಿಡುತ್ತಾರೆ ಎಂದಿದ್ದಾರೆ . ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತ ಮತ್ತು ಆತನ ವೃದ್ಧೆ ತಾಯಿ ಹಲ್ಲೆಗೊಳಗಾಗಿದ್ದರು. ಸೋಮವಾರ ಆ ಮಹಿಳೆ ಮೃತಪಟ್ಟಿದ್ದು, ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಮಮತಾ, ಆ ಸಹೋದರಿ ಹೇಗೆ ಮೃತಪಟ್ಟರು ಎಂಬುದು ನನಗೆ ಗೊತ್ತಿಲ್ಲ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಾವು ಬೆಂಬಲಿಸುವುದಿಲ್ಲ. ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂದು ಟ್ವೀಟ್ ಮಾಡಿ ಅಮಿತ್ ಶಾ ಕೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾವ ಪರಿಸ್ಥಿತಿ ಇದೆ?  ಹಾಥರಸ್​ನಲ್ಲಿ ಏನು ನಡೆಯುತ್ತಿದೆ?. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಅಮಿತ್ ಶಾ ಸುಮ್ಮನಿದ್ದದ್ದು ಏಕೆ ಎಂದು ಮಮತಾ ಪ್ರಶ್ನಿಸಿದ್ದಾರೆ.

ನೀತಿ ಸಂಹಿತೆ ಇಲ್ಲಿ ಜಾರಿಯಾಗಿದೆ. ಕಾನೂನು ಮತ್ತು ಆದೇಶ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿದೆ. ಹೀಗಿದ್ದರೂ ಕಳೆದ ಕೆಲವು ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು ಶೇಕಚಾ 80ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಏಪ್ರಿಲ್1, ಮೂರನೇ ಹಂತದ್ದು ಏಪ್ರಿಲ್ 6, ನಾಲ್ಕನೇ ಹಂತದ್ದು ಏಪ್ರಿಲ್ 10, ಐದನೇ ಹಂತದ್ದು ಏಪ್ರಿಲ್ 17, ಆರನೇ ಹಂತ- ಏಪ್ರಿಲ್ 22, ಏಳನೇ ಹಂತ- ಏಪ್ರಿಲ್ 26 ಮತ್ತು 8ನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: West Bengal Elections 2021: ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾದ ಬಿಜೆಪಿ ಕಾರ್ಯಕರ್ತನ 85 ವರ್ಷದ ವೃದ್ಧತಾಯಿ ನಿಧನ