New wage code explainer: ಏಪ್ರಿಲ್ 1ರಿಂದ ಬದಲಾಗಬಹುದು ನಿಮ್ಮ ಕೆಲಸದ ಅವಧಿ, ಸಂಬಳದ ಲೆಕ್ಕ
ಏಪ್ರಿಲ್ 1, 2021ರಿಂದ ಅನ್ವಯ ಆಗುವಂತೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನ ಮತ್ತು ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
ಹೊಸ ಆರ್ಥಿಕ ವರ್ಷದಿಂದ (ಏಪ್ರಿಲ್ 1, 2021) ಕಾರ್ಪೊರೇಟ್ ವಲಯದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಅದರಲ್ಲಿ ಬಹಳ ಮುಖ್ಯವಾದದ್ದು ಏನೆಂದರೆ ಕಾರ್ಯ ನಿರ್ವಹಿಸುವ ಅವಧಿ ಹಾಗೂ ಸಿಬ್ಬಂದಿಯ ವೇತನ ರಚನೆಯಲ್ಲಿನ ಆಗಲಿರುವ ಬದಲಾವಣೆ. ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಹೊಸ ಯೋಜನೆ ಏನೆಂದರೆ, ಸದ್ಯಕ್ಕೆ ದಿನಕ್ಕೆ 9 ಗಂಟೆಯ ಕಾರ್ಯ ನಿರ್ವಹಿಸುವ ಅವಧಿ ಇರುವುದನ್ನು 12 ಗಂಟೆಗೆ ಹೆಚ್ಚಳ ಮಾಡಿದ್ದು, ವಾರಕ್ಕೆ ನಾಲ್ಕು ದಿನವನ್ನು ಕಾರ್ಯ ನಿರ್ವಹಿಸುವ ದಿನವಾಗಿ ಮಾಡಿದೆ.
ಮತ್ತೊಂದು ಬದಲಾವಣೆ ಏನೆಂದರೆ, ಗ್ರಾಚ್ಯುಟಿ ಮತ್ತು ಪ್ರಾವಿಡೆಂಟ್ ಫಂಡ್ (ಭವಿಷ್ಯ ನಿಧಿ) ಹೆಚ್ಚಿಸಿರುವುದರಿಂದ ಉದ್ಯೋಗಿಯ ಟೇಕ್ ಹೋಮ್ ಸ್ಯಾಲರಿ (ಕೈಗೆ ದೊರೆಯುವ ವೇತನ) ಕಡಿಮೆ ಆಗಲಿದೆ ಎಂಬ ನಿರೀಕ್ಷೆ ಸರ್ಕಾರದ್ದಾಗಿದೆ. ಸರ್ಕಾರವು ಕಳೆದ ವರ್ಷ ಸಂಸತ್ನಲ್ಲಿ ವೇತನ ನೀತಿ ಸಂಹಿತೆ ಮಸೂದೆಯನ್ನು ಅಂಗೀಕರಿಸಿತು. ಅದು ಏಪ್ರಿಲ್ 1ನೇ ತಾರೀಕಿನಂದು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಕೆಳಕಂಡ ಬದಲಾವಣೆಗಳನ್ನು ಕಾರ್ಪೊರೇಟ್ ಸಿಬ್ಬಂದಿ ಮತ್ತು ಉದ್ಯೋಗದಾತರಲ್ಲಿ ತರಲಾಗುತ್ತದೆ.
1. ಪ್ರತಿ 5 ಗಂಟೆಗಳ ಕೆಲಸದ ನಂತರ 30 ನಿಮಿಷಗಳ ಬಿಡುವು ಕಡ್ಡಾಯ. 2. ಸತತ 5 ಗಂಟೆಗಳ ಮೇಲ್ಪಟ್ಟು ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ. 3. ಸದ್ಯಕ್ಕೆ ಕಾರ್ಯ ನಿರ್ವಹಣೆ ಅವಧಿಯ ನಂತರದ ಹೆಚ್ಚುವರಿಯಾಗಿ15 ನಿಮಿಷ ಕಾರ್ಯ ನಿರ್ವಹಿಸಿದಲ್ಲಿ ಅದನ್ನು ಓವರ್ಟೈಮ್ ಎಂದು ಪರಿಗಣಿಸಲಾಗುತ್ತದೆ. ಆದರೆ ಇನ್ನು ಮುಂದೆ ಕಾರ್ಯ ನಿರ್ವಹಣೆ ಅವಧಿ ನಂತರ 30 ನಿಮಿಷಕ್ಕಿಂತ ಕಡಿಮೆ ಸಮಯದ ಹೆಚ್ಚುವರಿ ಕೆಲಸವನ್ನು ಓವರ್ಟೈಮ್ ಎಂದು ಪರಿಗಣಿಸುವುದಿಲ್ಲ. 4. ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು. ಆದ್ದರಿಂದ ಉದ್ಯೋಗಿಯ ವೇತನ ರಚನೆಯಲ್ಲಿ ಕಡ್ಡಾಯವಾಗಿ ಬದಲಾವಣೆ ಆಗುತ್ತದೆ. 5. ಗ್ರಾಚ್ಯುಯಿಟಿ ಮತ್ತು ಪ್ರಾವಿಡೆಂಟ್ ಫಂಡ್ ಹೆಚ್ಚಳ ಮಾಡುವುದರಿಂದ ನಿವೃತ್ತಿ ನಂತರ ಬರುವ ಮೊತ್ತವು ಹೆಚ್ಚಾಗಲಿದೆ.
ಈ ಹೊಸ ನಿಯಮಾವಳಿಗಳಿಂದ ಯಾವುದೇ ಉದ್ಯೋಗ ಸಂಸ್ಥೆಯ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಅನುಕೂಲ ಆಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
ಇದನ್ನೂ ಓದಿ: New Wage Code: ಏಪ್ರಿಲ್ನಿಂದ ನಿಮ್ಮ ಕೈಗೆ ಬರುವ ಸಂಬಳದ ಲೆಕ್ಕಾಚಾರವೇ ಆಗಲಿದೆ ಬದಲು