ದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ (TMC) ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯನ್ ( Derek O’Brien) ಅವರನ್ನು ಸಂಸತ್ ನ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಚುನಾವಣಾ ಸುಧಾರಣಾ ವಿಧೇಯಕ ಮತ್ತು 12 ಸಂಸದರ ಅಮಾನತು ಕುರಿತು ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಸಭೆಯಿಂದ ಹೊರನಡೆಯುತ್ತಿರುವಾಗ ಒಬ್ರಿಯನ್ ನಿಯಮ ಪುಸ್ತಕವನ್ನು ಅಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರವು ಕೃಷಿ ಕಾನೂನುಗಳನ್ನು ಹೇರುತ್ತಿರುವಾಗ ನಾನು ರಾಜ್ಯಸಭೆಯಿಂದದ ಕೊನೆಯ ಬಾರಿ ಅಮಾನತುಗೊಂಡಿದ್ದೆ. ಅದರ ನಂತರ ಏನಾಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದು ಸಂಸತ್ನ್ನು ಅಪಹಾಸ್ಯ ಮಾಡುವ ಮತ್ತು ಚುನಾವಣಾ ಕಾನೂನುಗಳ ಮಸೂದೆ 2021 (election reforms Bill) ಅನ್ನು ಅಂಗೀಕರಿಸುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟಿಸುತ್ತಿರುವಾಗ ಅಮಾನತುಗೊಳಿಸಲಾಗಿದೆ. ಈ ಮಸೂದೆಯನ್ನು ಕೂಡ ಶೀಘ್ರದಲ್ಲೇ ರದ್ದುಗೊಳಿಸಲಾಗುವುದು ಎಂದು ಭಾವಿಸುತ್ತೇವೆ ಎಂದು ಒಬ್ರಿಯನ್ ಟ್ವೀಟ್ ಮಾಡಿದ್ದಾರೆ.
The last time I got suspended from RS was when govt. was BULLDOZING #FarmLaws
We all know what happened after that.
Today, suspended while protesting against BJP making a mockery of #Parliament and BULLDOZING #ElectionLawsBill2021
Hope this Bill too will be repealed soon
— Derek O’Brien | ডেরেক ও’ব্রায়েন (@derekobrienmp) December 21, 2021
ಕಾಂಗ್ರೆಸ್ ಮುಖ್ಯ ವಿಪ್ ಜೈರಾಮ್ ರಮೇಶ್ ಮಾತನಾಡಿ, “ಇಂದು ರಾಜ್ಯಸಭೆಯಲ್ಲಿ ಅಧ್ಯಕ್ಷರು ಮತದಾರರ ಪಟ್ಟಿ-ಆಧಾರ್ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರತಿಪಕ್ಷದ ಪ್ರಸ್ತಾವನೆಗೆ ಮತ ಹಾಕಲು ಸಹ ಅವಕಾಶ ನೀಡಲಿಲ್ಲ. ಪ್ರತಿಪಕ್ಷಗಳು ಪ್ರತಿಭಟನೆಯಿಂದ ಹೊರನಡೆದವು. ಕೃಷಿ ಮಸೂದೆಗಳಂತೆ ಈ ಮಸೂದೆಯೂ ಅತ್ಯಂತ ಪ್ರಜಾಸತ್ತಾತ್ಮಕವಲ್ಲದೆ ಅಂಗೀಕರಿಸಲ್ಪಟ್ಟಿತು ಎಂದಿದ್ದಾರೆ.
ಒಬ್ರಿಯನ್ ನಿಯಮ ಪುಸ್ತಕವನ್ನು ಎಸೆದಿದ್ದನ್ನು ಉಲ್ಲೇಖಿಸಿದ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಈ ಘಟನೆಯು ಕೇವಲ ಸದನಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದಿದ್ದಾರೆ.
ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಸೇರಿದಂತೆ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿರುವ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಗಳವಾರ ರಾಜ್ಯಸಭೆಯಲ್ಲಿ ಗದ್ದಲದ ನಡುವೆ ಅಂಗೀಕರಿಸಲಾಯಿತು.
ಪ್ರತಿಪಕ್ಷಗಳ ಸದಸ್ಯರು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಎಪಿ, ಶಿವಸೇನೆ, ಎಡಪಕ್ಷಗಳು, ಆರ್‌ಜೆಡಿ, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ತಮಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ ಸಂದರ್ಭದಲ್ಲಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಪ್ರಸಕ್ತ ಅಧಿವೇಶನದಲ್ಲಿ ರಾಜ್ಯಸಭೆಯು ತನ್ನ ಸದಸ್ಯರನ್ನು ಅಮಾನತುಗೊಳಿಸಿರುವುದು ಇದು ಎರಡನೇ ಬಾರಿ. ಚಳಿಗಾಲದ ಅಧಿವೇಶನದ ಮೊದಲ ದಿನ, ಮೇಲ್ಮನೆ ಕಳೆದ ತಿಂಗಳು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದಂತೆ 12 ಸಂಸದರನ್ನು ಪ್ರಸ್ತುತ ಅಧಿವೇಶನದಿಂದ ಅಮಾನತುಗೊಳಿಸಿತ್ತು.
ಸದನದ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿತ್ತು. ಪ್ರಿಯಾಂಕಾ ಚತುರ್ವೇದಿ ಡೋಲಾ ಸೇನ್, ಎಳಮರಂ ಕರೀಂ (ಸಿಪಿಎಂ), ಕಾಂಗ್ರೆಸ್‌ನ ಫುಲೋ ದೇವಿ ನೇತಮ್, ಛಾಯಾ ವರ್ಮಾ, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ಟಿಎಂಸಿಯ ಶಾಂತಾ ಛೆಟ್ರಿ ಮತ್ತು ಶಿವಸೇನೆಯ ಅನಿಲ್ ದೇಸಾಯಿ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: ಆಧಾರ್, ವೋಟರ್ ಐಡಿ ಲಿಂಕ್ ಮಾಡುವ ಚುನಾವಣಾ ಸುಧಾರಣಾ ಮಸೂದೆಗೆ ರಾಜ್ಯಸಭೆ ಅನುಮೋದನೆ
Published On - 6:50 pm, Tue, 21 December 21