ಇತ್ತ ಸಮುದ್ರ ತೀರವೊಂದರಲ್ಲಿ selfie ಅಮ್ಮ ತನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಗಲೇ, ಅತ್ತ ಸಮುದ್ರದ ಅಲೆಗಳು ತಣ್ಣಗೆ ದಡಕ್ಕೆ ಅಪ್ಪಿಸುತ್ತಲೇ ಆ ತಾಯಿಯ ಎರಡೂವರೆ ವರ್ಷದ ಮಗುವನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದೆ ಎಂಬಲ್ಲಿಗೆ ಇಂದಿನ ಸೆಲ್ಫಿ ಯುಗದ ದುರಂತಗಳ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಆದ್ರೆ ಸೆಲ್ಫಿ ಪ್ರೇಮಿಗಳು ಮಾತ್ರ ಇಂತಹ ಅಚಾತುರ್ಯಗಳಿಂದ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ವಾರಂತ್ಯದ ಮೋಜುಮಸ್ತಿಯಲ್ಲಿದ್ದಾಗ ಮೊನ್ನೆ ಭಾನುವಾರ ಮಧ್ಯಾಹ್ನ ಕೇರಳದ ಅಲಪುಳಾ ತೀರದಲ್ಲಿ ಈ ತೀರದ ಅತಿರೇಕ ಘಟಿಸಿದೆ. ಆದಿಕೃಷ್ಣ ಎಂಬ ಎರಡೂವರೆ ವರ್ಷದ ಮಗುವೇ ಈ ದುರಂತ ಅಂತ್ಯ ಕಂಡಿರುವುದು. ಆದಿಕೃಷ್ಣನ ತಂದೆ-ತಾಯಿ ಲಕ್ಷ್ಮಣನ್ ಮತ್ತು ಅನಿತಾಮೋಳಿ ಪಾಲಕ್ಕಾಡ್ ನಿವಾಸಿಗಳು. ಇವರ ಸಂಬಂಧಿ ಬಿನು, ಅಲಪುಳಾದಲ್ಲಿ ವಾಸವಾಗಿದ್ದಾರೆ. ಹೀಗೆ.. ಬನ್ನೀ.. ಭಾನುವಾರ ಸಮುದ್ರದ ದಂಡೆಯಲ್ಲಿ ಸುತ್ತಾಡಿ ಬರೋಣ ಎಂದು ನತದೃಷ್ಟ ಆದಿಕೃಷ್ಣನ ತಂದೆತಾಯಿಗೆ ಬಿನು ಆತಿಥ್ಯ ನೀಡಿದ್ದಾರೆ. ಅದೇ ಮಗುವಿಗೆ ಮುಳುವಾಗಿದೆ.