ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್ವಾಲ್ಗೆ ಬರೆದ ಪತ್ರಕ್ಕೆ ಟ್ವಿಟರ್ ಸಂಸ್ಥೆ (Twitter) ಪ್ರತಿಕ್ರಿಯಿಸಿದ್ದು, ಅವರು ಮಾಡಿದ್ದ ಆರೋಪವನ್ನು ನಿರಾಕರಿಸಿದೆ. ಈ ಕುರಿತು ಎಎನ್ಐ ವರದಿ ಮಾಡಿದ್ದು, ಸಂಸ್ಥೆಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿದೆ. ಟ್ವಿಟರ್ನಲ್ಲಿ ಅನುಯಾಯಿಗಳ ಸಂಖ್ಯೆ ನಿಖರವಾಗಿದೆ. ಟ್ವಿಟರ್ ಸ್ಪ್ಯಾಮ್ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಗಾಂಧಿ ಪರಾಗ್ ಅಗರ್ವಾಲ್ಗೆ ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ಮೇಲೆ ಪ್ರಭಾವ ಬೀರಿ ತಮ್ಮ ಫಾಲೋವರ್ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅಂಕಿಅಂಶಗಳನ್ನೂ ನೀಡಿದ್ದರು. ಇದೀಗ ರಾಹುಲ್ ಹೇಳಿಕೆಗೆ ಟ್ವಿಟರ್ ತನ್ನ ಪ್ರತಿಕ್ರಿಯೆ ನೀಡಿ, ಆರೋಪ ನಿರಾಕರಿಸಿದೆ.
ರಾಹುಲ್ ಆರೋಪಕ್ಕೆ ಟ್ವಿಟರ್ ಪ್ರತಿಕ್ರಿಯೆ ಏನು?:
ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿರುವಂತೆ, ಟ್ವಿಟರ್ ವಕ್ತಾರರು ರಾಹುಲ್ ಗಾಂಧಿಯವರಿಗೆ ಸಂಸ್ಥೆಯ ನೀತಿಯನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ. ‘‘ಟ್ವಿಟರ್ ಸ್ಪಾಮ್ ಹಾಗೂ ನಕಲಿ ಫಾಲೋವರ್ಗಳ ಹೆಚ್ಚಳದ ಕುರಿತಂತೆ ಅತ್ಯುನ್ನತ ತಂತ್ರಜ್ಞಾನದ ಮೂಲಕ ನಿಗಾವಹಿಸುತ್ತದೆ. ಇದರಿಂದಾಗಿ ಫಾಲೋವರ್ಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ’’ ಎಂದು ವಕ್ತಾರರು ತಿಳಿಸಿದ್ದಾರೆ.
ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್ ಮೂಲಕ ಟ್ವಿಟರ್ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ವಾರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕುತ್ತೇವೆ ಎಂದು ತಿಳಿಸಿರುವ ವಕ್ತಾರರು, ಹೆಚ್ಚಿನ ವಿವರಕ್ಕೆ ಟ್ವಿಟರ್ ಟ್ರಾನ್ಸ್ಪರೆನ್ಸಿ ಸೆಂಟರ್ಅನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ಟ್ವಿಟರ್ನ ಈ ಕಾರ್ಯನಿರ್ವಹಣೆಯಿಂದ ಕೆಲವು ಖಾತೆಗಳಲ್ಲಿ ಸಣ್ಣ ಬದಲಾವಣೆಯಾಗಿದ್ದರೆ, ಮತ್ತೆ ಕೆಲವು ಖಾತೆಗಳು ಹೆಚ್ಚಿನ ಪರಿಣಾಮ ಎದುರಿಸಿವೆ ಎಂದೂ ಅವರು ಹೇಳಿದ್ದಾರೆ.
We remove millions of accounts each week for violating our policies on platform manipulation&spam. You can take a look at latest Twitter Transparency Center update for more context.While some accounts notic minor difference,in certain cases no.could be higher: Twitter Spox (3/3)
— ANI (@ANI) January 27, 2022
ಪರಾಗ್ ಅಗರ್ವಾಲ್ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?:
ಸರ್ಕಾರದ ಒತ್ತಡದಿಂದ ತಮ್ಮ ಟ್ವಿಟರ್ ಫಾಲೋವರ್ಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ನ ಸಿಇಒ ಪರಾಗ್ ಅಗರ್ವಾಲ್ಗೆ ಪತ್ರ ಬರೆದಿದ್ದರು. ಮೊದಲಿಗೆ ರಾಹುಲ್ ಗಾಂಧಿಯವರ ಖಾತೆಯನ್ನು ಪ್ರತಿ ತಿಂಗಳು ಸುಮಾರು 2 ಲಕ್ಷ ಹೊಸಬರು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ 2021ರ ಆಗಸ್ಟ್ ನಂತರ ಈ ಸಂಖ್ಯೆ ಕೇವಲ 2,500ರ ಆಸುಪಾಸಿನಲ್ಲಿದೆ. ಅರ್ಥಾತ್ ಸುಮಾರು 2,500 ಜನರು ಮಾತ್ರ ಪ್ರತಿ ತಿಂಗಳು ರಾಹುಲ್ ಗಾಂಧಿ ಖಾತೆಯನ್ನು ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕೆಲ ಸಮಯದಿಂದ ಟ್ವಿಟರ್ ಫಾಲೋವರ್ಗಳ ಸಂಖ್ಯೆ 19.5 ಮಿಲಿಯನ್ನಲ್ಲೇ ಸ್ಥಿರವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಪರೇಶ್ ಅಗರವಾಲ್ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, ‘‘ಭಾರತದಲ್ಲಿ ನಿರಂಕುಶಾಧಿಕಾರದ ಬೆಳವಣಿಗೆಗೆ ಟ್ವಿಟರ್ ಸಕ್ರಿಯವಾಗಿ ಸಹಾಯ ಮಾಡದಂತೆ ನೋಡಿಕೊಳ್ಳುವ ಅಗಾಧ ಜವಾಬ್ದಾರಿ ನಿಮ್ಮ ಮೇಲಿದೆ’’ ಎಂದು ಬರೆದಿದ್ದರು. ‘‘ಜಗತ್ತಿನಾದ್ಯಂತ ಉದಾರವಾದಿ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರದ ನಡುವಿನ ಸೈದ್ಧಾಂತಿಕ ಯುದ್ಧವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ರೂಪಿಸಲಾಗುತ್ತಿದೆ. ಇದು ಟ್ವಿಟರ್‌ನಂತಹ ದೊಡ್ಡ ಕಂಪನಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಹೊರಿಸಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ:
ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್ ಫಾಲೋವರ್ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ
Published On - 11:24 am, Thu, 27 January 22