ಮುಂಬೈ: ಶಿವಸೇನಾ (Shiv Sena) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಬಣಕ್ಕೆ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray), ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದ್ದಾರೆ. ಶಿಂಧೆ ಅವರು ಬಂಡಾಯವೆದ್ದು ಬಿಜೆಪಿ ಜತೆ ಕೈಜೋಡಿಸಿದ ಸುಮಾರು 8 ತಿಂಗಳ ನಂತರ ಚುನಾವಣಾ ಆಯೋಗ ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿತ್ತು. ಅವರು ಶಿವಸೇನಾ ಚಿಹ್ನೆಯನ್ನು ಕಳವು ಮಾಡಿದ್ದಾರೆ. ನಾವು ಭರವಸೆ ಕಳೆದುಕೊಳ್ಳುವುದಿಲ್ಲ. ಹೋರಾಟ ಮುಂದುವರಿಸಲಿದ್ದೇವೆ. ಸದ್ಯಕ್ಕೆ ಕಳ್ಳತನದ ಮೂಲಕ ಶಿಂಧೆ ಖುಷಿಯಾಗಿರಬಹುದು. ಒಮ್ಮೆ ದೇಶದ್ರೋಹಿಯಾದರೆ ಆತ ಎಂದಿಗೂ ದೇಶದ್ರೋಹಿಯೇ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಶುಕ್ರವಾರ ನಿರ್ಧಾರ ಪ್ರಕಟಿಸಿದ್ದ ಕೇಂದ್ರ ಚುನಾವಣಾ ಆಯೋಗ, ‘ಶಿವಸೇನಾ’ ಎಂಬ ಹೆಸರು ಮತ್ತು ಪಕ್ಷದ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಶಿಂಧೆ ಬಣಕ್ಕೆ ನೀಡಿತ್ತು. ಉದ್ಧವ್ ಠಾಕ್ರೆ ಬಣವು ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಗುರುತಿಸಿಕೊಳ್ಳಬಹುದು ಎಂಬುದಾಗಿ ಸೂಚಿಸಿತ್ತು. ಈ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಠಾಕ್ರೆ ಟೀಕಿಸಿದ್ದಾರೆ.
ಪ್ರಜಾಪ್ರಭುತ್ವವು ಮೃತಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಈಗ ಕೆಂಪುಕೋಟೆಯಲ್ಲಿ ನಿಂತು ಘೋಷಿಸಬಹುದು ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಈ ಮಧ್ಯೆ, ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ. ಪಕ್ಷದ ಚಿಹ್ನೆ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಆದೇಶ ನೀಡಿದೆ ಚುನಾವಣಾ ಆಯೋಗದ ಆದೇಶವನ್ನು ‘ಸುಪ್ರೀಂ ಕೋರ್ಟ್’ನಲ್ಲಿ ಪ್ರಶ್ನಿಸುತ್ತೇವೆ ಎಂದು ಮಾಜಿ ಸಿಎಂ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಈ ಹಿಂದೆ ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಬಣಗಳು ಶಿವಸೇನೆ ಚಿಹ್ನೆ ಬಳಸಬಾರದು ಎಂದು ಚುನಾವಣಾ ಆಯೋಗ ಹೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ