ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ, 2ನೇ ಬಜೆಟ್ ಮಂಡಿಸ್ತಿದೆ. ದೇಶದ ಆರ್ಥಿಕ ಪ್ರಗತಿ ಪಾತಾಳಕ್ಕೆ ಕುಸಿದಿರೋದ್ರಿಂದ, ಈ ಬಾರಿಯ ಬಜೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೀಗಾಗಿ ಮೋದಿ ಸರ್ಕಾರ ಎದುರಿಸ್ತಿರೋ ಸವಾಲುಗಳೇನು..? ಅವುಗಳನ್ನ ಹೇಗೆ ನಿಭಾಯಿಸಬಹುದು ಅನ್ನೋದರ ಮೇಲೆ ಒಂದು ನೋಟ ಇಲ್ಲಿದೆ.
ದೇಶದಲ್ಲಿ ಈಗ ಎಲ್ಲೇ ಹೋದ್ರೂ ಬಹುಚರ್ಚಿತವಾಗ್ತಿರೋ ವಿಚಾರಗಳಲ್ಲಿ ಆರ್ಥಿಕ ಕುಸಿತವೂ ಒಂದು. ಅದ್ರಲ್ಲೂ ಬಜೆಟ್ ಹತ್ತಿರ ಬರ್ತಿದ್ದಂತೆ ಆರ್ಥಿಕ ಕುಸಿತದ ಕುರಿತು ದೇಶದಲ್ಲಿ ಭಾರಿ ಚರ್ಚೆಗಳು ಆಗ್ತಿವೆ. ದೇಶದ ಆರ್ಥಿಕ ಪ್ರಗತಿ ಶೇಕಡಾ 4.5ಕ್ಕೆ ಕುಸಿದಿದ್ದು.. ಆರು ವರ್ಷಗಳ ಹಿಂದಿದ್ದ ಸ್ಥಿತಿಗೆ ಮರಳಿದೆ. ಹೀಗಾಗಿ ಕುಸಿದಿರೋ ಅರ್ಥ ವ್ಯವಸ್ಥೆಗೆ ಟಾನಿಕ್ ನೀಡಲೇಬೇಕಾದ ಅನಿವಾರ್ಯತೆ ಮೋದಿ ಸರ್ಕಾರದ ಎದುರಿದೆ. ಹೀಗಾಗಿ ಈ ಬಾರಿಯ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳಿವೆ.
ಕುಸಿಯುತ್ತಿರುವ ಅರ್ಥವ್ಯವಸ್ಥೆಗೆ ನೀಡಲೇಬೇಕಿದೆ ಟಾನಿಕ್..!
ಮೋದಿ ಸರ್ಕಾರದ ಎದುರಿಗೆ ಕುಸಿಯುತ್ತಿರೋ ಅರ್ಥವ್ಯವಸ್ಥೆಯನ್ನು ಮರಳಿ ತರಬೇಕಿರೋ ಅತ್ಯಂತ ಪ್ರಮುಖ ಸವಾಲಿದೆ. ಇದರ ಜೊತೆಗೆ ಸಾಲು ಸಾಲು ಸವಾಲುಗಳು ಮೋದಿ ಸರ್ಕಾರದ ಎದುರಿಗಿವೆ. ಅವೇನು ಅಂತಾ ಡೀಟೇಲಾಗಿ ನೋಡೋಣ.
ಪ್ರಮುಖ ಸವಾಲುಗಳೇನು..?
-ನಿರುದ್ಯೋಗ ಸಮಸ್ಯೆಗೆ ಪರಿಹಾರದ ಜೊತೆಗೆ ಸಮಸ್ಯೆ ಉಲ್ಬಣಿಸದಂತೆ ಕ್ರಮ
-ಕುಸಿದಿರೋ ಆಟೋಮೊಬೈಲ್ ಕ್ಷೇತ್ರಕ್ಕೆ ಚೇತರಿಕೆ ನೀಡಬೇಕಾದ ಅವಶ್ಯಕತೆ
-2022ರೊಳಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ಮುಖ್ಯ ಗುರಿ
-ಕುಸಿದು ಬಿದ್ದಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ನೀಡುವುದು
-ಆರ್ಥಿಕ ಕುಸಿತಕ್ಕೆ ತಡೆಯೊಡ್ಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದು
-ಕೈಗಾರಿಕಾಭಿವೃದ್ಧಿಗೆ ಎಫ್ಡಿಐ ಹರಿದು ಬರುವಂತೆ ಮಾಡುವುದು
-ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆಯೊಡ್ಡಲು ಸೂಕ್ತ ಕ್ರಮ
-ತೆರಿಗೆ ಸಂಗ್ರಹ ಹೆಚ್ಚಿಸಿ ಆದಾಯ ಸಂಗ್ರಹದ ಗುರಿ ಮುಟ್ಟುವುದು
-2024ರ ವೇಳೆಗೆ 5ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಗುರಿ ಮುಟ್ಟುವುದು
ಭಾರತದಲ್ಲಿ ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ದೇಶದಲ್ಲಿ 45 ವರ್ಷಗಳಲ್ಲೇ ಅತ್ಯಂತ ಹೆಚ್ಚು ನಿರುದ್ಯೋಗ ಉಂಟಾಗಿದೆ. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಸಮಸ್ಯೆ ಉಲ್ಬಣಿಸದಂತೆ ಕ್ರಮ ಕೈಗೊಳ್ಳಬೇಕಿದೆ. ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿರುವುದು ಆಟೋಮೊಬೈಲ್ ಕ್ಷೇತ್ರದಲ್ಲಿ ಉಂಟಾಗಿರುವ ಬೇಡಿಕೆ ಕುಸಿತದಲ್ಲಿ ಪ್ರತಿಫಲಿಸಿದೆ. ವಾಹನ ಮಾರಾಟದಲ್ಲಿ ಶೇ.18ರಷ್ಟು ಕುಸಿತ ಕಂಡಿರೋದ್ರಿಂದ ಆಟೋಮೊಬೈಲ್ ಕ್ಷೇತ್ರ ಚೇತರಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಕೃಷಿಕರ ಪಾತ್ರ ಅತ್ಯಂತ ಗಣನೀಯವಾದದ್ದು.
ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿ, 2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ಗುರಿ ಹಾಕಿಕೊಂಡಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹಣದ ಹರಿವು ಇರುವಂತೆ ಮಾಡಬೇಕಿದೆ. ದೇಶದ ಆರ್ಥಿಕತೆ ಕುಸಿಯಲು ಬ್ಯಾಂಕಿಂಗ್ ವ್ಯವಸ್ಥೆ ವಿಫಲವಾಗಿರೋದು ಸಹ ಒಂದು ಕಾರಣ. ಪರಿಣಾಮ, ಕುಸಿದು ಬಿದ್ದಿರೋ ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ನೀಡಬೇಕಾಗಿದೆ. 2016-17ರ 2ನೇ ತ್ರೈಮಾಸಿಕದಲ್ಲಿ ಶೇಕಡಾ 8.87ರಷ್ಟು ವೃದ್ಧಿ ಸಾಧಿಸಿದ್ದ ಜಿಡಿಪಿ, 2019-20ರ 2ನೇ ತ್ರೈಮಾಸಿಕದಲ್ಲಿ ಶೇಕಡಾ 4.5ಕ್ಕೆ ಕುಸಿದಿದೆ. ಇದನ್ನು ತಡೆಗಟ್ಟಿ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ. ಕೈಗಾರಿಕಾಭಿವೃದ್ಧಿ ವೇಗ ಪಡೆಯಲು ಎಫ್ಡಿಐ ಹರಿದು ಬರುವಂತೆ ಮಾಡುಬೇಕಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಿರುದ್ಯೋಗ, ಆರ್ಥಿಕ ಕುಸಿತದಿಂದ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ಹೀಗಾಗಿ ತೆರಿಗೆ ಸಂಗ್ರಹ ಹೆಚ್ಚಿಸಿ ಆದಾಯ ಸಂಗ್ರಹದ ಗುರಿ ಮುಟ್ಟಲು ಕ್ರಮಗಳನ್ನು ಕೈಗೊಳ್ಳಬೇಕಿದೆ. 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಆಗಬೇಕು ಅನ್ನೋ ಗುರಿ ಮುಟ್ಟಬೇಕಾದ್ರೆ, ಆರ್ಥಿಕತೆ ಶೇಕಡಾ 10ರಷ್ಟು ದರದಲ್ಲಿ ವೃದ್ಧಿಯಾಗಬೇಕು. ಶೇಕಡಾ 10ರಷ್ಟು ದರದಲ್ಲಿ ಆರ್ಥಿಕ ವೃದ್ಧಿಯಾಗಬೇಕಾದರೆ ಹೂಡಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಬೇಡಿಕೆಯನ್ನೂ ಹೆಚ್ಚಿಸಬೇಕಿದೆ.
ಮೋದಿ ಸರ್ಕಾರದ ಎದುರಿಗಿರೋ ಈ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದ್ರೆ, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಿದೆ. ನಗರಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ ಸಂಬಂಧಿತ ವಲಯಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡು ಬರ್ತಿಲ್ಲ. ಕಟ್ಟಡ ನಿರ್ಮಾಣ ಕ್ಷೇತ್ರ ವಾರ್ಷಿಕವಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನ ಸೃಷ್ಟಿಸುತ್ತದೆ. ಹೀಗಾಗಿ, ಈ ವಲಯಕ್ಕೆ ಮೋದಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಬಹುದು.
ಈಗಾಗಲೇ ಸರ್ಕಾರ ಮೂಲ ಸೌಕರ್ಯ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಮುಂದಾಗಿದೆ. ಈ ಪ್ರಯತ್ನಗಳಿಗೆ ಪೂರಕವಾಗಿ ಇಂದಿನ ಬಜೆಟ್ ಮಂಡನೆಯಾಗೋ ನಿರೀಕ್ಷೆ ಇದೆ.
Published On - 9:14 am, Sat, 1 February 20