ಹೈದರಾಬಾದ್​ಗೆ ನವಾಬ ನಿಜಾಮರ ಡೈನಾಸ್ಟಿ ಸಾಕು, ಬಿಜೆಪಿಯ ಡೆಮಾಕ್ರಸಿ ಬೇಕು: ಅಮಿತ್ ಶಾ

|

Updated on: Nov 29, 2020 | 6:03 PM

ಗ್ರೇಟರ್ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ನವಾಬ ನಿಜಾಮರ ರಾಜಪರಂಪರೆಯ ಆಡಳಿದಿಂದ  ಪ್ರಜಾಪ್ರಭುತ್ವದೆಡೆಗೆ ಹೈದರಾಬಾದ್ ಹೆಜ್ಜೆಹಾಕಬೇಕಿದೆ ಎಂದರು.

ಹೈದರಾಬಾದ್​ಗೆ ನವಾಬ ನಿಜಾಮರ ಡೈನಾಸ್ಟಿ ಸಾಕು, ಬಿಜೆಪಿಯ ಡೆಮಾಕ್ರಸಿ ಬೇಕು: ಅಮಿತ್ ಶಾ
ಸಿಕಂದರಾಬಾದ್​ನಲ್ಲಿ ಕಾರ್ಯಕರ್ತರತ್ತ ಕೈಬೀಸಿದ ಗೃಹ ಸಚಿವ ಅಮಿತ್ ಶಾ
Follow us on

ಹೈದರಾಬಾದ್: ಬಿಜೆಪಿ ಬೆಂಬಲಿಸುವ ಮೂಲಕ ನವಾಬ್, ನಿಜಾಮರ ರಾಜಪರಂಪರೆಯ ಆಡಳಿದಿಂದ ಪ್ರಜಾಪ್ರಭುತ್ವದೆಡೆಗೆ ಹೈದರಾಬಾದ್ ಹೆಜ್ಜೆಹಾಕಬೇಕಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ಸಿಕಂದರಾಬಾದ್​ನಲ್ಲಿ ಗ್ರೇಟರ್ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ಹೈದರಾಬಾದ್ ಭಾರತದಲ್ಲೇ ಉಳಿಯಲು ಬಿಜೆಪಿಗೆ ಮತ ನೀಡಿ
ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರಯತ್ನದಿಂದ ತೆಲಂಗಾಣ ಪ್ರಾಂತ್ಯ ಭಾರತಕ್ಕೆ ಸೇರಿತು. ಈಗ ಹೈದರಾಬಾದ್ ಜನತೆ ಬಿಜೆಪಿ ಬೆಂಬಲಿಸುವ ಮೂಲಕ ಹೈದರಾಬಾದ್ ಪಾಕಿಸ್ತಾನಕ್ಕೆ ಸೇರದಂತೆ ತಡೆಯಬೇಕಿದೆ. ಹೈದರಾಬಾದ್​ ಅನ್ನು ಭವಿಷ್ಯದಲ್ಲಿ ಆಧುನಿಕ ಐಟಿ ಹಬ್ ಆಗಿ ರೂಪಿಸುತ್ತೇವೆ. ವರ್ಕ್ ಫ್ರಾಮ್ ಎನಿವೇರ್ ಜಾರಿಗೊಳಿಸುತ್ತೇವೆ ಎಂದು ಅಮಿತ್ ಶಾ ಘೋಷಿಸಿದರು.

ಇಂದಿನ ರೋಡ್ ಶೋದಲ್ಲಿ ಅಮಿತ್ ಶಾ

ಚಂದ್ರಶೇಖರ್ ರಾವ್ ಮೇಲೆ ಟೀಕಾ ಪ್ರಹಾರ

ಹೈದರಾಬಾದ್​ ಅಕ್ರಮ ಕಟ್ಟಡಗಳಿಂದ ತುಂಬಿಹೋಗಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತೇವೆ. ಸುಸಜ್ಜಿತ ನಗರ ನಿರ್ಮಿಸುತ್ತೇವೆ. ತೆಲಂಗಾಣವನ್ನು ಆಯುಷ್ಮಾನ್ ಭಾರತ ಯೋಜನೆಗೆ ಸೇರಲು ಕೆಸಿಆರ್ ಒಪ್ಪಲಿಲ್ಲ. ಅವರಿಗೆ ಬಡವರ ಆರೋಗ್ಯದ ಮೇಲೆ ಕಾಳಜಿಯಿಲ್ಲ. ಕಳೆದ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಕೆಸಿಆರ್ ಒಂದಾದರೂ ಈಡೇರಿಸಿದ್ದಾರಾ ಎಂದು ಅಮಿತ್ ಶಾ ಟೀಕಿಸಿದರು. ಅಲ್ಲದೇ, ಓವೈಸಿ ಜೊತೆ ಗೆಳೆತನ ಬೆಳೆಸದಂತೆ ಚಂದ್ರಶೇಖರ್ ರಾವ್​ಗೆ ಸಲಹೆ ನೀಡಿದರು.

ನಾವು ಹೇಳಿದಂತೆ ಮಾಡುತ್ತೇವೆ ..
ಮೋದಿ ಸರ್ಕಾರ ದೇಶವಾಸಿಗಳಲ್ಲಿ ಯಾವ ಬೇಧವನ್ನೂ ಮಾಡಿಲ್ಲ. ಅಡುಗೆ ಅನಿಲ, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಎಲ್ಲರಿಗೂ ಸಮಾನವಾಗಿ ಒದಗಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ನಾವು ಹೇಳಿದಂತೆ ಮಾಡುತ್ತೇವೆ. ನೀಡಿರುವ ಎಲ್ಲಾ ಭರವಸೆಗಳು ಈಡೇರಿವೆ ಎಂದು ಅಮಿತ್ ಶಾ ಹೇಳಿದರು. ರೋಡ್​ ಶೋದಲ್ಲಿ ಅದ್ಧೂರಿ ಸ್ವಾಗತ ನೀಡಿದ ಹೈದರಾಬಾದ್ ಜನರಿಗೆ ಧನ್ಯವಾದ ಅರ್ಪಿಸಿದರು.

ಪಾಲಿಕೆ ಚುನಾವಣೆ ಸಣ್ಣದಲ್ಲ
ಗಲ್ಲಿ ಚುನಾವಣೆಗೆ ದೆಹಲಿಯಿಂದ ಬಂದದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು ಕೆಸಿಆರ್​ ಸೋಲುವ ಹೆದರಿಕೆಯಿಂದ ಟೀಕಿಸುತ್ತಿದ್ದಾರೆ. ಪಾಲಿಕೆ ಚುನಾವಣೆ ಸಣ್ಣದಲ್ಲ. ಎಲ್ಲಾ ಚುನಾವಣೆಗೂ ಅದರದ್ದೇ ಆದ ಮಹತ್ವವಿದೆ. ಗಲ್ಲಿ ಚುನಾವಣೆಗೆ ಪ್ರಚಾರಕ್ಕೆ ಬಂದಿದ್ದಾರೆಂದು ಟೀಕಿಸುವವರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಅಮಿತ್ ಶಾ ಮಾಡಿದ GHMC ಚುನಾವಣಾ ಪ್ರಚಾರದ ಸಂಪೂರ್ಣ ವಿವರ ಓದಲು ಓದಲು ಇಲ್ಲಿ ಕ್ಲಿಕ್ಕಿಸಿ:  ಹೈದರಾಬಾದ್​ನ ಪುನರುತ್ಥಾನ ಬಿಜೆಪಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ

Published On - 5:48 pm, Sun, 29 November 20