ಭೋಪಾಲ್: ದೇಶದ್ಯಂತ ಭಾರಿ ಸದ್ದು ಮಾಡಿದ ಆದಿವಾಸಿ ವ್ಯಕ್ತಿ ದಶ್ಮತ್ ರಾವತ್ ಮೇಲೆ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು, ಇದೀಗ ಆರೋಪಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿದ್ದು, ತನ್ನನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವಿಚಾರವಾಗಿ ದಶ್ಮತ್ ರಾವತ್ ಅವರು ಕೂಡ ಪ್ರವೇಶ್ ಶುಕ್ಲಾ ಅವರನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ, ಅವರ ತಪ್ಪು ಅವರಿಗೆ ಅರಿವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಆದಿವಾಸಿ ಸಮುದಾಯದ ವ್ಯಕ್ತಿ ದಶ್ಮತ್ ರಾವತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಪ್ರವೇಶ್ ಶುಕ್ಲಾ ಎಂಬಾತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋಯೊಂದು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಸಂಬಂಧಿತ ಆರೋಪಗಳ ಜೊತೆಗೆ, ಪ್ರಸ್ತುತ ಜೈಲಿನಲ್ಲಿರುವ ಶುಕ್ಲಾ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ತನಿಖಾಯನ್ನು ಪ್ರಾರಂಭಿಸಲಾಗಿದೆ. ಸಿಧಿಯಲ್ಲಿರುವ ಶುಕ್ಲಾ ಅವರು ಅಕ್ರಮ ವಾಗಿ ನಿರ್ಮಿಸಿರುವ ಮನೆಯ ಕೆಲವು ಭಾಗಗಳನ್ನು ಕೆಡವಲಾಗಿದೆ. ಸರ್ಕಾರಕ್ಕೆ ನನ್ನ ಬೇಡಿಕೆ ಏನೆಂದರೆ ಅವರಿಂದ (ಆರೋಪಿಯಿಂದ) ತಪ್ಪಾಗಿದೆ. ಈಗ ಪ್ರವೇಶ್ ಶುಕ್ಲಾ ಅವರನ್ನು ಬಿಡುಗಡೆ ಮಾಡಬೇಕು. ಈ ಹಿಂದೆ ಏನಾಯಿತು ಅದನ್ನು ಬಿಟ್ಟುಬೀಡುವ, ಅವರ ತಪ್ಪಿನ ಬಗ್ಗೆ ಅವರಿಗೆ ಅರಿವಾಗಿದೆ ಎಂದು ದಶ್ಮತ್ ರಾವತ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ ನನಗೆ ಅವಮಾನ ಮಾಡಿದ್ದಾರೆ, ಆದರೆ ಅವರನ್ನು ಕ್ಷಮಿಸಿ, ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿರುವ ದಶ್ಮತ್ ರಾವತ್ ಗುಣಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಹೌದು, ನಾನು ಒಪ್ಪುತ್ತೇನೆ, ಅವರು ತಪ್ಪು ಮಾಡಿದ್ದರೆ, ಅವರು ನಮ್ಮ ಗ್ರಾಮದ ಪಂಡಿತರು, ಅವರನ್ನು ಬಿಡುಗಡೆ ಮಾಡಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ, ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡುವುದನ್ನು ಬಿಟ್ಟರೆ ಸರ್ಕಾರದಿಂದ ಬೇರೇನೂ ಬೇಡ ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ: Madhya Pradesh: ಆದಿವಾಸಿ ವ್ಯಕ್ತಿಯ ಪಾದಗಳನ್ನು ತೊಳೆದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಈ ಮೂತ್ರ ವಿಸರ್ಜನೆ ಘಟನೆ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ, ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ ಅಸೆಂಬ್ಲಿ ಚುನಾವಣೆಗಳು ನಡೆಯಲಿವೆ, ಆರೋಪಿಯು ಸ್ಥಳೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪವನ್ನು ಕೇಸರಿ ಪಕ್ಷ ವಿರೋಧಿಸಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಭೋಪಾಲ್‌ನಲ್ಲಿರುವ ಸಿಎಂ ನಿವಾಸದಲ್ಲಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದು ಮತ್ತು ಈ ಅವಮಾನಕರ ಘಟನೆಯ ಬಗ್ಗೆ ಕ್ಷಮೆಯಾಚಿಸಿದರು. ಆದರೆ ವಿರೋಧ ಪಕ್ಷವು ಚೌಹಾಣ್ ಅವರ ನಡೆಯನ್ನು ನಾಟಕ ಎಂದು ಬಣ್ಣಿಸಿದೆ. ದಶ್ಮತ್ ರಾವತ್ ಅವರಿಗೆ ರಾಜ್ಯ ಸರ್ಕಾರ ₹ 5 ಲಕ್ಷ ಆರ್ಥಿಕ ನೆರವು ಮಂಜೂರು ಮಾಡಿದ್ದು, ಅವರ ಮನೆ ನಿರ್ಮಾಣಕ್ಕೆ ₹ 1.5 ಲಕ್ಷ ಹೆಚ್ಚುವರಿ ಮೊತ್ತವನ್ನು ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Sat, 8 July 23