ಅಮೆರಿಕಾದ ವಿದ್ಯಾರ್ಥಿ ವೀಸಾ ಪಡೆದ ಭಾರತದ 82,000 ವಿದ್ಯಾರ್ಥಿಗಳು: ದಾಖಲೆ ನಿರ್ಮಾಣ

ಭಾರತದ 82,000 ವಿದ್ಯಾರ್ಥಿಗಳು ಅಮೆರಿಕಾದ (USA) ವಿದ್ಯಾರ್ಥಿ ವೀಸಾ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಅಮೆರಿಕಾದ ವಿದ್ಯಾರ್ಥಿ ವೀಸಾ ಪಡೆದ ಭಾರತದ 82,000 ವಿದ್ಯಾರ್ಥಿಗಳು: ದಾಖಲೆ ನಿರ್ಮಾಣ
ವೀಸಾ
Edited By:

Updated on: Sep 08, 2022 | 8:35 PM

ನವದೆಹಲಿ: ಭಾರತದ 82,000 ವಿದ್ಯಾರ್ಥಿಗಳು ಅಮೆರಿಕಾದ (USA) ವಿದ್ಯಾರ್ಥಿ ವೀಸಾ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಇತರ ರಾಷ್ಟ್ರದ ವಿದ್ಯಾರ್ಥಿಗಳಿಗಿಂತ ಭಾರತೀಯ ವಿದ್ಯಾರ್ಥಿಗಳೇ ಹೆಚ್ಚು ವೀಸಾ ಪಡೆದಿದ್ದಾರೆ. 2022ರಲ್ಲಿ ಈವರೆಗೆ 82,000 ವಿದ್ಯಾರ್ಥಿಗಳು ವೀಸಾ ಪಡೆದ್ದಾರೆ.

ಯುಎಸ್ ಮಿಷನ್ 2022ರ ಅಡಿಯಲ್ಲಿ, ಅಮೇರಿಕಾದ ರಾಯಭಾರಿ ಕಚೇರಿಯು ಭಾರತದಲ್ಲಿ ಇಲ್ಲಿಯವರೆಗೆ 82,000 ವಿದ್ಯಾರ್ಥಿಗಳಿಗೆ ವೀಸಾ ನೀಡಿದೆ. ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನಲ್ಲಿರುವ ನಾಲ್ಕು ರಾಯಭಾರಿ ಕಚೇರಿಗಳು ಈ ವೀಸಾಗಳನ್ನು ನೀಡಿವೆ.

ಈ ರಾಯಭಾರಿ ಕಚೇರಿಗಳು ಮೇಯಿಂದ ವೀಸಾ ನೀಡಲು ಪ್ರಾರಂಭಿಸಿದ್ದು, ಆಗಸ್ಟ್‌ವರೆಗೆ ವಿದ್ಯಾರ್ಥಿಗಳಿಗೆ ವೀಸಾ ನೀಡಿದ್ದು, ಇದು ಹಿಂದಿನ ಎಲ್ಲ ದಾಖಲೆಗಳನ್ನು ಸರಗಟ್ಟಿದೆ ಎಂದು ಯುಎಸ್​ ಭಾರತದಲ್ಲಿನ ಅತ್ಯಂತ ಹಿರಿಯ ಯುಎಸ್ ರಾಜತಾಂತ್ರಿಕ ಚಾರ್ಜ್ ಡಿ ಅಫೇರ್ಸ್ ಪೆಟ್ರೀಷಿಯಾ ಲ್ಯಾಸಿನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾಗಿದ್ದರಿಂದ ವಿದ್ಯಾರ್ಥಿಗಳು ಯುಎಸ್​ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಲು ಮತ್ತು ಹೊಸದಾಗಿ ದಾಖಲಾತಿ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.

2020-2021ರ ಶೈಕ್ಷಣಿಕ ವರ್ಷದಲ್ಲಿ ಭಾರತದಿಂದ 1,67,582 ವಿದ್ಯಾರ್ಥಿಗಳು ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದರು. ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು 20 ಪ್ರತಿಶತದಷ್ಟು ಭಾರತೀಯ ವಿದ್ಯಾರ್ಥಿಗಳೆ ಇದ್ದಾರೆ ಎಂದು ತಿಳಿಸಿದರು.

2020ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಯುಎಸ್ ಸರ್ಕಾರ ಮತ್ತು ಯುಎಸ್ ಉನ್ನತ ಶಿಕ್ಷಣ ಸಂಸ್ಥೆಗಳು ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ, ಮಾಧ್ಯಮಗಳ ಮೂಲಕ ಬೋಧನೆ ಮಾಡಿದ್ದವು. ಈಗ ಕೊರೊನಾ ಸೋಂಕಿನಿಂದ ಯುಎಸ್ ಮುಕ್ತವಾಗಿದ್ದು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಸ್ವಾಗತಿಸುತ್ತಿವೆ. ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅವಕಾಶಗಳು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದರು.

ಅಮೆರಿಕಾದಲ್ಲಿ ಅಧ್ಯಯನ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು, iOS ಅಥವಾ Android ಮೊಬೈಲ್​ ಫೋನ್​ಗಳಲ್ಲಿ ಉಚಿತವಾಗಿ ಲಭ್ಯವಿರುವ EducationUSA ಇಂಡಿಯಾ ಅಪ್ಲಿಕೇಶನ್​ನ್ನು ಡೌನ್‌ಲೋಡ್ ಮಾಡಬೇಕು. ಇದರಿಂದ ಕಾಲೇಜುಗಳ ಕುರಿತು ಇತ್ತೀಚಿನ ಮಾಹಿತಿ ನಿಮಗೆ ದೊರೆಯುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Thu, 8 September 22