ಭಾರತದ ಜನರ ಕ್ಷೇಮ ಅಮೆರಿಕಕ್ಕೆ ತುಂಬ ಮುಖ್ಯ, ಅವರೊಂದಿಗೆ ನಾವಿದ್ದೇವೆ: ಕಮಲಾ ಹ್ಯಾರಿಸ್​

|

Updated on: May 08, 2021 | 12:06 PM

ಭಾರತಕ್ಕೆ ನಾವು ಮರುಪೂರಣ ಮಾಡಲು ಸಾಧ್ಯವಿರುವ ಆಮ್ಲಜನಕ ಸಿಲಿಂಡರ್​​ಗಳನ್ನು ಕಳಿಸಿದ್ದೇವೆ. ಆಮ್ಲಜನಕ ಸಾಂದ್ರಕಗಳು, ಎನ್​95 ಮಾಸ್ಕ್​ಗಳು, ರೆಮ್​ಡಿಸಿವಿರ್​​ಗಳನ್ನೂ ತಲುಪಿಸಿದ್ದೇವೆ. ಹಾಗೇ, ಕೊವಿಡ್​ 19 ಲಸಿಕೆಗಳ ಪೇಟೆಂಟ್​ಗಳನ್ನು ತೆಗೆದುಹಾಕಲು ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ ಎಂದು ಕಮಲಾ ಹ್ಯಾರಿಸ್ ಹೇಳಿದರು.

ಭಾರತದ ಜನರ ಕ್ಷೇಮ ಅಮೆರಿಕಕ್ಕೆ ತುಂಬ ಮುಖ್ಯ, ಅವರೊಂದಿಗೆ ನಾವಿದ್ದೇವೆ: ಕಮಲಾ ಹ್ಯಾರಿಸ್​
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​
Follow us on

ಕೊವಿಡ್​ 19 ಎರಡನೇ ಅಲೆಗೆ ತತ್ತರಿಸುವ ಭಾರತದೊಂದಿಗೆ ನಾವಿದ್ದೇವೆ. ಎಲ್ಲ ರೀತಿಯ ಸಹಕಾರವನ್ನೂ ನೀಡುತ್ತೇವೆ ಎಂಬ ಸಂದೇಶವನ್ನು ಇಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನೀಡಿದರು. ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಡಯಾಸ್ಪೊರಾ ಔಟ್ ರೀಚ್ ಕಾರ್ಯಕ್ರಮದಲ್ಲಿ ಯುಎಸ್​, ಕೊವಿಡ್​ ರಿಲೀಫ್​ ಫಾರ್​ ಇಂಡಿಯಾ ಎಂಬ ವಿಷಯದ ಬಗ್ಗೆ ಮಾತನಾಡಿ, ಭಾರತದೊಟ್ಟಿಗೆ ನಮ್ಮ ಒಗ್ಗಟ್ಟಿದೆ ಎಂದು ತಿಳಿಸಿದರು.

ಇಂಡಿಯಾಸ್ಪೋರಾ ಮತ್ತ ಅಮೇರಿಕನ್​ ಇಂಡಿಯಾ ಫೌಂಡೇಶನ್​ನಂಥ ಡಯಾಸ್ಪೋರಾ ಗುಂಪುಗಳು ಹಲವು ವರ್ಷಗಳಿಂದಲೂ ಅಮೆರಿಕ ಮತ್ತು ಭಾರತದ ನಡುವೆ ಸಂಪರ್ಕ ಕಲ್ಪಿಸಿವೆ. ಈ ಬಾರಿ ಕೊವಿಡ 19 ನಿಯಂತ್ರಣ ಮತ್ತು ಪರಿಹಾರ ಕಾರ್ಯದಲ್ಲೂ ಶ್ರಮಿಸಿವೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಭಾರತದಲ್ಲಿ ಕೊವಿಡ್​ 19 ಸೋಂಕಿನ ಪ್ರಸರಣ ಹೆಚ್ಚುತ್ತಿರುವುದು, ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಸೋಂಕಿನಿಂದ ಜೀವ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಾಂತ್ವನಗಳನ್ನು ಹೇಳಲು ಬಯಸುತ್ತೇನೆ. ಭಾರತದಲ್ಲಿ ಕೊರೊನಾ ಪರಿಸ್ಥಿತಿ ಭೀಕರವಾಗುತ್ತಿದ್ದಂತೆ ಅದನ್ನು ತಡೆಯಲು ನಮ್ಮ ಯುಎಸ್​ ಆಡಳಿತವೂ ಸಹ ತ್ವರಿತ ಕ್ರಮಗಳನ್ನು ಕೈಗೊಂಡಿದೆ.

ಏ.26ರಂದು ಅಧ್ಯಕ್ಷ ಜೋ ಬೈಡನ್​ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ತಮ್ಮ ಸಹಕಾರ, ನೆರವನ್ನು ವ್ಯಕ್ತಪಡಿಸಿದ್ದಾರೆ. ಹಾಗೇ ಏಪ್ರಿಲ್ 30ರಿಂದ ಅಮೆರಿಕದಿಂದ ಭಾರತಕ್ಕೆ ಪರಿಹಾರ ಸಾಮಗ್ರಿಗಳ ರವಾನೆ ಶುರುವಾಗಿದೆ. ಇದರಲ್ಲಿ ನಮ್ಮ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಕಮಲಾ ಹ್ಯಾರಿಸ್ ತಿಳಿಸಿದರು.

ಭಾರತಕ್ಕೆ ನಾವು ಮರುಪೂರಣ ಮಾಡಲು ಸಾಧ್ಯವಿರುವ ಆಮ್ಲಜನಕ ಸಿಲಿಂಡರ್​​ಗಳನ್ನು ಕಳಿಸಿದ್ದೇವೆ. ಆಮ್ಲಜನಕ ಸಾಂದ್ರಕಗಳು, ಎನ್​95 ಮಾಸ್ಕ್​ಗಳು, ರೆಮ್​ಡಿಸಿವಿರ್​​ಗಳನ್ನೂ ತಲುಪಿಸಿದ್ದೇವೆ. ಹಾಗೇ, ಕೊವಿಡ್​ 19 ಲಸಿಕೆಗಳ ಪೇಟೆಂಟ್​ಗಳನ್ನು ತೆಗೆದುಹಾಕಲು ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ಅಲ್ಲಿನ ನಾಗರಿಕರಿಗೆ ವೇಗವಾಗಿ, ಪರಿಣಾಮಾತ್ಮಕವಾಗಿ ಲಸಿಕೆ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಈ ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ನಮ್ಮ ಆಸ್ಪತ್ರೆಗಳು ತುಂಬಿತುಳುಕುತ್ತಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಹಾಗೇ ಇಂದು ಭಾರತತ ಸಂಕಷ್ಟದ ಸಮಯದಲ್ಲಿ ಸಹಾಯ ನೀಡಲು ನಾವು ದೃಢ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು. ನಾನು ಭಾರತದ ಮೂಲದವಳು. ನನ್ನ ತಾಯಿ ಭಾರತದಲ್ಲಿಯೇ ಹುಟ್ಟಿ ಬೆಳೆದವರು. ಈಗಲೂ ನನ್ನ ಕುಟುಂಬದವರು ಅನೇಕರು ಭಾರತದಲ್ಲಿ ಇದ್ದಾರೆ. ಅಲ್ಲಿನ ಜನರ ಕ್ಷೇಮ ನನಗೂ, ಅಮೆರಿಕಕ್ಕೂ ತುಂಬ ಮುಖ್ಯ. ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಿದರೆ ಕೊವಿಡ್ 19 ಸಂಕಷ್ಟವನ್ನು ಶೀಘ್ರದಲ್ಲೇ ದಾಟುವುದು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್​ಗೆ ಕೊರೊನಾ ಪಾಸಿಟಿವ್​; ಇದೊಂದು ಸಣ್ಣ ಜ್ವರ ಎಂದ ನಟಿ

ದೇಶದಲ್ಲಿ ಒಂದೇ ದಿನ 4,187 ಮಂದಿ ಕೊರೊನಾದಿಂದ ಸಾವು; ಮರಣದ ಸಂಖ್ಯೆಯಲ್ಲಿ ದಾಖಲೆ, ಚೇತರಿಕೆ ಪ್ರಮಾಣದಲ್ಲಿ ಕುಸಿತ