ಅಯೋಧ್ಯೆಗೆ ನಾಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್: ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಮೈಲಿಗಲ್ಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 31, 2022 | 1:41 PM

ಕುಸುರಿ ಕೆಲಸ ಮಾಡಿರುವ ಶಿಲೆಯೊಂದನ್ನು ಸ್ಥಾಪಿಸುವ ಮೂಲಕ ಯೋಗಿ ಆದಿತ್ಯನಾಥ್ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.

ಅಯೋಧ್ಯೆಗೆ ನಾಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್: ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಮೈಲಿಗಲ್ಲು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
Follow us on

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಯೋಧ್ಯೆಗೆ (Ayodhya) ಬುಧವಾರ (ಜೂನ್ 1) ಭೇಟಿ ನೀಡಿ, ರಾಮ ಮಂದಿರ ನಿರ್ಮಾಣ ಚಟುವಟಿಕೆಯ ಪ್ರಗತಿ ಪರಿಶೀಲಿಸಲಿದ್ದಾರೆ. ಗರ್ಭ ಗೃಹ ನಿರ್ಮಾಣ ಕಾರ್ಯಕ್ಕೆ ಇದೇ ವೇಳೆ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಮುಟ್ಟಿದಂತೆ ಆಗುತ್ತದೆ. ಕುಸುರಿ ಕೆಲಸ ಮಾಡಿರುವ ಶಿಲೆಯೊಂದನ್ನು ಸ್ಥಾಪಿಸುವ ಮೂಲಕ ಯೋಗಿ ಆದಿತ್ಯನಾಥ್ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.

ಗರ್ಭಗೃಹವನ್ನು ಸಂಪೂರ್ಣವಾಗಿ ರಾಜಸ್ಥಾನದ ಮಕ್ರಾನಾ ಬೆಟ್ಟಗಳ ಮಾರ್ಬಲ್​ಗಳಿಂದಲೇ ನಿರ್ಮಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ರಾಮ ಜನ್ಮಭೂಮಿ ನಿರ್ಮಾಣ ಟ್ರಸ್ಟ್ ತಿಳಿಸಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ 8ರಿಂದ 9 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಕೆತ್ತನೆಯಾದ ಕಲ್ಲುಗಳು ಮತ್ತು 6.37 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಕುಸಿಯಿಲ್ಲದ ಗ್ರಾನೈಟ್ ಕಲ್ಲು, 4.70 ಲಕ್ಷ ಅಡಿಗಳಷ್ಟು ಕುಸಿರಿ ಕೆತ್ತನೆಯಿರುವ ಕೆಂಪು ಗ್ರಾನೈಟ್ ಬಳಕೆಯಾಗಲಿದೆ. ಗರ್ಭಗೃಹಕ್ಕಾಗಿ 13,300 ಕ್ಯೂಬಿಕ್ ಅಡಿಗಳಷ್ಟು ಮಕ್ರಾನಾ ಶ್ವೇತಾ ಶಿಲೆಯ ಕುಸುರಿ ಮಾರ್ಬಲ್​ಗಳ ಬಳಕೆಯಾಗಲಿದೆ.

ಆಗಸ್ಟ್ 2020ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 2024ರ ಲೋಕಸಭೆ ಚುನಾವಣೆಗೆ ಮೊದಲೇ ರಾಮಮಂದಿರ ನಿರ್ಮಾಣ ಕಾರ್ಯವು ಮುಕ್ತಾಯವಾಗಲಿದೆ.

ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವಂತೆಯೇ ಉತ್ತರ ಪ್ರದೇಶದ ಮಥುರಾದಲ್ಲಿ ಶಾಹಿ ಈದ್ಗಾ ಮತ್ತು ಕಾಶಿಯಲ್ಲಿ ಜ್ಞಾನವಾಪಿ ಮಸೀದಿ ವಿವಾದಗಳು ಸುದ್ದಿಯಲ್ಲಿವೆ. ಕಳೆದ ಒಂದು ತಿಂಗಳಿನಿಂದಲೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಎರಡೂ ಮಸೀದಿಗಳ ಬಗ್ಗೆ ಸುದ್ದಿ ಪ್ರಕಟವಾಗುತ್ತಿದೆ. ನ್ಯಾಯಾಲಯಗಳು ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ ವಿಚಾರಣೆ ನಡೆಸುತ್ತಿವೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಅಧಿಕಾರಿ ನೃಪೇಂದ್ರ ಮಿಶ್ರಾ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಡಿಸೆಂಬರ್ 2023ರಲ್ಲಿ ಗರ್ಭಗುಡಿಯ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಘೋಷಿಸಿಸಿದ್ದರು. 2024ರ ಲೋಕಸಭಾ ಚುನಾವಣೆಗೆ ಮೊದಲು ಅಯೋಧ್ಯೆಯಲ್ಲಿ ರಾಮನ ಪೂಜೆಗೆ ಅವಕಾಶ ಮಾಡಿಕೊಡುವುದು ಬಿಜೆಪಿಯ ಉದ್ದೇಶ. ರಾಮ ಮಂದಿರವನ್ನು ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

1990ರಲ್ಲಿ ದೇಶದ 3.5 ಲಕ್ಷ ಗ್ರಾಮಗಳಿಂದ ಸಂಗ್ರಹಿಸಿದ್ದ ಇಟ್ಟಿಗೆಗಳನ್ನೂ ರಾಮಮಂದಿರಕ್ಕೆ ಬಳಸಲಾಗುವುದು. ರಾಮ್ ಘಾಟ್ ಕಾರ್ಯಾಗಾರದಲ್ಲಿ ಸಂಗ್ರಹಿಸಿದ್ದ ‘ರಾಮ ಶಿಲೆ’ಗಳನ್ನು ಈಗಾಗಲೇ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವರ್ಗಾಯಿಸಲಾಗಿದೆ. ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ನಿರ್ಮಿಸುವ ಈಶಾನ್ಯ ಕೋನದಲ್ಲಿ ಈ ಶಿಲೆಗಳನ್ನು ಬಳಸಲಾಗುವುದು ಎಂದು ಮೂಲಗಳು ಹೇಳಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Tue, 31 May 22